News

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೂ ಕೊರೊನಾ ಕೊಕ್ಕೆ

01 July, 2020 11:27 AM IST By:

ಕೊರೋನಾ ವೈರಸ್‌ನ ಕರಿನೆರಳು ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಮೇಲೂ ಬಿದ್ದಿದೆ. ಪ್ರತೀವರ್ಷ ಲಾಲ್‌ಬಾಗ್‌ನಲ್ಲಿ ನಡೆಯಬೇಕಿದ್ದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು  ಈ ವರ್ಷ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.

ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ ಶತಮಾನದ ಇತಿಹಾಸವಿದೆ. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದಂದು ಪ್ರತಿ ವರ್ಷ ಪ್ರದರ್ಶನ ನಡೆಯುತ್ತದೆ. ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದುಗೊಳಿಸಲಾಗಿದೆ.

ಆಗಸ್ಟ್ ಮೊದಲ ವಾರದಲ್ಲಿ ಆರಂಭವಾಗಬೇಕಿದ್ದ ಫಲಪುಷ್ಪ ಪ್ರದರ್ಶನಕ್ಕೆ ಜೂನ್ ಮೊದಲ ವಾರದಲ್ಲೇ ಸಿದ್ದತೆಗಳು ಆರಂಭವಾಗುತ್ತಿದ್ದವು. ಆದರೆ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಈ ಬಾರಿಯ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಬಾರಿಯ ಫಲಪುಷ್ಪ ಪ್ರದರ್ಶನ ಕೈಬಿಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಮಿನಿ ತೋಟಗಳ ಸ್ಪರ್ಧೆ, ಟೆರೇಸ್ ಗಾರ್ಡನ್ ಸ್ಪರ್ಧೆ, ಇಕೆಬಾನ್ ಸೇರಿ ತೋಟಗಾರಿಕೆ ವಿಷಯಕ್ಕೆ ಸಂಬಂಧಿಸಿದ ಸ್ಪರ್ಧೆಗಳು ನಡೆಯುತ್ತಿದ್ದವು. ಈ ಪ್ರದರ್ಶನ ನೋಡಲು ದೇಶ ವಿದೇಶಗಳಿಂದ ಪುಷ್ಪಪ್ರಿಯರು ಬರುತ್ತಿದ್ದರು. ಆದರೆ ಈ ಬಾರಿ ಪುಷ್ಪಪ್ರಿಯರಿಗೆ ನಿರಾಶೆಯಾಗಿದೆ.