News

180 ರೂಪಾಯಿಗೆ ತಲುಪಿದ ಅಡುಗೆ ಎಣ್ಣೆ ದರ

28 May, 2021 8:35 PM IST By:
cooking oil

ಒಂದೆಡೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ, ಮತ್ತೊಂದೆಡೆ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನತೆಗೆ ಅಡುಗೆ ಎಣ್ಣೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಿದೆ. ಹೌದು ಅಡುಗೆ ಎಣ್ಣೆದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಡಿಮೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

 ಪ್ರತಿ ಲೀಟರಿಗೆ ಈಗ 180 ರೂಪಾಯಿಗೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಉತ್ಪಾದನೆ ಕುಸಿತ, ಆಮದು ಸಂಕಗಳ ಪರಿಣಾಮವಾಗಿ ಖಾದ್ಯ ತೈಲ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗುತ್ತಿದೆ. ಈಗ  ಜನಸಾಮಾನ್ಯರಿಗೆ ಹಾಗೂ ಮಧ್ಯಮವರ್ಗದವರಿಗೆ ಅಡುಗೆ ಎಣ್ಣೆ ಬಂಗಾರದಂತಾಗಿದೆ.

ಸೂರ್ಯಕಾಂತಿ, ಸೋಯಾಬಿನ್, ಸಾಸಿವೆ ಎಣ್ಣೆದರ ಕಳೆದ ವರ್ಷದಿಂದ ಏರುಗತಿಯಲ್ಲಿ ಸಾಗುತ್ತಿದೆ. ಪ್ರತಿ ಲೀಟರಿಗೆ 80 ರೂಪಾಯಗಳಿಂದ 180 ರೂಪಾಯಿಗೆ ಏರಿಕೆಯಾಗಿದೆ. ಕೋವಿಡ್-19 ಬಿಕ್ಕಟ್ಟಿನ ಪರಿಣಾಮ ಜನತೆಯ ಆದಾಯದ ಮಟ್ಟದಲ್ಲಿಯೂ ಕುಸಿತ ಸಂಭವಿಸಿದೆ.

ಭಾರತವು ಮಲೇಷಿಯಾ, ಇಂಡೋನೇಷಿಯಾ, ಬ್ರೆಜಿಲ್, ಉಕ್ರೇನ್ ಹಾಗೂ ಇಂಡೋನೇಷಿಯಾ ದೇಶಗಳಿಂದ ಖಾದ್ಯ ತೈಲ  ಆಮದು ಮಾಡಿಕೊಳ್ಳುತ್ತದೆ. ಆಮದು ಮೇಲೆ ಶೇ. 35 ರಷ್ಟು ಸುಂಕ ವಿಧಿಸಿರುವುದು ಹಾಗೂ ಉತ್ಪಾದನೆ ಕಡಿಮೆಯಾಗುತ್ತಿರುವುದರಿಂದ ಅಡುಗೆ ಎಣ್ಣೆ ಬೆಲೆ ದುಬಾರಿಯಾಗಿದೆ ಎನ್ನಲಾಗುತ್ತಿದೆ.

ಖಾದ್ಯ ತೈಲ ಬೆಳೆಗಳಿಗೆ ಉತ್ತೇಜನ ನೀಡಿದರೆ ಮಾತ್ರ ಬೆಲೆ ಇಳಿಯಾಗುವ ಸಾಧ್ಯತೆಯಿದೆ. ಖಾದ್ಯ ತೈಲಬೆಳೆಗಳಾದ, ಶೇಂಗಾ (ನೆಲಗಡಲೆ), ಸೂರ್ಯಕಾಂತಿ, ಸೋಯಾಬಿನ್, ಸಾಸಿವೆ, ಸೇರಿದಂತೆ ಇನ್ನಿತರ ಖಾದ್ಯ ತೈಲಬೆಳೆಗಳನ್ನು ಬೆಳೆಸಲು ಸರ್ಕಾರ ರೈತರಿಗೆ ಪ್ರೋತ್ಸಾಹಿಸಬೇಕು. ಕೇವಲ ಪ್ರೋತ್ಸಾಹಿಸಿದರೆ ಸಾಲದು,  ಆ ಬೆಳೆಗಳಿಗೆ ಯೋಗ್ಯ ಬೆಲೆ ನೀಡಬೇಕು. ಅಂದಾಗ ಮಾತ್ರ ರೈತರು ಅಂತಹ ಬೆಳೆ ಬೆಳೆಯಲು ಮುಂದಾಗುತ್ತಾನೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಖಾದ್ಯ ತೈಲಬೆಲೆ ಇನ್ನೂ ದುಬಾರಿಯಾಗುವ ಸಾಧ್ಯತೆಯಿದೆ.  ಆಮದು ತಗ್ಗಿಸಿ ದೀರ್ಘಕಾಲಿಕ ಪರಿಹಾರಕ್ಕಾಗಿ ದೇಶದಲ್ಲಿಯೇ ರೈತರಿಗೆ ಖಾದ್ಯ ತೈಲಬೆಳೆ ಬೆಳೆಸಲು ಪ್ರೋತ್ಸಾಹಿಸಿದರೆ ಆಮದು ತಗ್ಗಿಸಬಹುದು. ಹಾಗೂ ರೈತರ ಆದಾಯವೂ ಹೆಚ್ಚಾಗಲಿದೆ.

ಖಾದ್ಯ ತೈಲ ಬೆಲೆ ಹೆಚ್ಚಳವಾಗುತ್ತಿದ್ದರಿಂದ ಹೋಟೆಲ್ ಉದ್ಯಮಕ್ಕೂ ಸಮಸ್ಯೆಯಾಗುತ್ತಿದೆ. ಹೋಟಲುಗಳಲ್ಲಿ ಮಾಡುವ ಪದಾರ್ಥಗಳ ಬೆಲೆ ಹೆಚ್ಚಳವಾಗಿ ಮತ್ತೆ ಸಾರ್ವಜನಿಕರಿಗೆ ಹೊರೆಯಾಗುತ್ತದೆ.

ಸರ್ಕಾರ ಮಧ್ಯಸ್ಥಿಕೆ ವಹಿಸಿ ಅಡುಗೆ ಎಣ್ಣೆಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಬೇಕು. ಮೊದಲೇ ಸಂಕಷ್ಟದಲ್ಲಿರುವ ಜನತೆಯ ಸಹಾಯಕ್ಕೆ ನಿಲ್ಲಬೇಕೆಂಬ ಒತ್ತಾಯ ಕೇಳಿಬರುತ್ತಿದೆ.