News

ವಾರದಿಂದ ಈಚೆಗೆ ಕಡಿಮೆಯಾದ ಅಡುಗೆ ಎಣ್ಣೆ ಬೆಲೆ; ಇನ್ನೂ ಕಡಿಮೆಯಾಗುತ್ತೆ ಅಂತಾರೆ ಮಾರುಕಟ್ಟೆ ವಿಶ್ಲೇಷಕರು!

21 September, 2021 7:34 PM IST By:

ಎರಡನೇ ಲಾಕ್‌ಡೌನ್ ಸಂದರ್ಭದಲ್ಲಿ ಗಗನಮುಖಿಯಾಗಿ, ಗ್ರಾಹಕರ ಜೇಬಿಗೆ ಭಾರವಾಗಿದ್ದ ಅಡುಗೆ ಎಣ್ಣೆ ಬೆಲೆ ಈಗ ಕೊಂಚ ಸಮಾಧಾನಕರ ಸ್ಥಿತಿಗೆ ಬಂದು ನಿಂತಿದೆ. ಖಾದ್ಯ ತೈಲ ಬೆಲೆ ಏರಿಕೆಯಿಂದಾಗಿ ಗ್ರಹಕರ ಖರೀದಿ ಸಾಮರ್ಥ್ಯ ಶೇ.50ರಷ್ಟು ಕಡಿಮೆಯಾಗಿತ್ತು. ಅಂದರೆ, ಈ ಹಿಂದೆ ತಿಂಗಳಿಗೆ 4 ಲೀಟರ್ ಅಡುಗೆ ಎಣ್ಣೆ ಖರೀದಿಸುತ್ತಿದ್ದ ಗ್ರಾಹಕರು ಬೆಲೆ ಏರಿಕೆ ಬಳಿಕ 2 ಲೀಟರ್ ಖರೀದಿಸುತ್ತಿದ್ದರು. ಗೃಹಿಣಿಯರು ಅಷ್ಟೇ ಎಣ್ಣೆಯಲ್ಲಿ ಕುಟುಂಬದ ಆಹಾರ ತಯಾರಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಮಧ್ಯಮ ವರ್ಗದ ಗ್ರಾಹಕರು ಖರೀದಿ ಕಡಿಮೆ ಮಾಡಿದ್ದರಿಂದ ಬೇಡಿಕೆ ಕುಸಿದು ಅಡುಗೆ ತೈಲ ಕಂಪನಿಗಳಿಗೆ ನಷ್ಟವಾಗಲಾರಂಭಿಸಿತು. ಇದರೊಂದಿಗೆ ಸಾರ್ವಜನಿಕರ ಕುಟುಂಬ ನಿರ್ವಹಣೆ ವೆಚ್ಚ ಕೂಡ ಹೆಚ್ಚಾಗಿತ್ತು.

ಇನ್ನೊಂದೆಡೆ ಕೊರೊನಾ ಸೋಂಕಿನ ಕಾರಣದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಅಡುಗೆ ಎಣ್ಣೆ ಬೆಲೆ ಏರಿಕೆಯು ಸಾರ್ವಜನಿಕರನ್ನು ಮತ್ತಷ್ಟು ಕಂಗೆಡಿಸಿತ್ತು. ಬೆಲೆ ಏರಿಕೆಯಿಂದ ಜನ ಎದುರಿಸುತ್ತಿರುವ ಸಮಸ್ಯೆ ಹಾಗೂ ಕಂಪನಿಗಳಿಗೆ ಆಗುತ್ತಿರುವ ನಷ್ಟ ಎರಡನ್ನೂ ಗಮನದಲ್ಲಿರಿಸಿಕೊಂಡ ಕೇಂದ್ರ ಸರ್ಕಾರ, ಕಚ್ಚಾ ಅಡುಗೆ ತೈಲದ ಮೇಲಿನ ಕಸ್ಟಮ್ಸ್ ಸುಂಕ (ಕಸ್ಟಮ್ಸ್ ಡ್ಯೂಟಿ) ಕಡಿತಗೊಳಿಸುವ ಮೂಲಕ ಏರುಗತಿಯಲ್ಲಿ ಸಾಗಿದ್ದ ಖಾದ್ಯ ತೈಲದ ಬೆಲೆಗೆ ಲಗಾಮು ಹಾಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಪರಿಣಾಮ ಅಡುಗೆ ಎಣ್ಣೆ ಬೆಲೆಯಲ್ಲಿ ಶೇ.24ರಷ್ಟು ಇಳಿಕೆ ಕಂಡುಬAದಿದೆ.

ಈಗೆಷ್ಟಿದೆ ಲೀಟರ್ ಎಣ್ಣೆ ದರ?

ಪ್ರಸ್ತುತ ಚಿಲ್ಲರೆ ಹಾಗೂ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಶೇ.24ರಷ್ಟು ಕಡಿಮೆಯಾಗಿದೆ. ಈ ಹಿಂದೆ 200 ರೂಪಾಯಿ ಸನಿಹಕ್ಕೆ ಹೋಗಿದ್ದ ಸೂರ್ಯಕಾಂತಿ ಎಣ್ಣೆ (ರೀಫೈನ್ಡ್ ಸನ್‌ಫ್ಲವರ್ ಆಯಿಲ್) ಬೆಲೆ ಈಗ ಒಂದು ಲೀಟರ್‌ಗೆ 157 ರೂ.ಗೆ ಇಳಿದಿದೆ. ಹಾಗೇ ಪಾಮ್ ಆಯಿಲ್ 115 ರೂ., ಸೋಯಾಬೀನ್ ಎಣ್ಣೆ 138 ರೂ., ಎಳ್ಳೆಣ್ಣೆ 157 ರೂ., ಶೇಂಗಾ ಎಣ್ಣೆ 174 ರೂ. ಹಾಗೂ ವನಸ್ಪತಿ ಎಣ್ಣೆ ಬೆಲೆ 141 ರೂ.ಗೆ ಬಂದು ನಿಂತಿದೆ.

ಕಿರಾಣಿ ಅಂಗಡಿಗಳಿಗೆ ಹೋಲಿಸಿದರೆ ಆನ್ ಲೈನ್ ಮಾರುಕಟ್ಟೆಯಲ್ಲಿ (ಇ-ಕಾಮರ್ಸ್) ಅಡುಗೆ ತೈಲದ ಬೆಲೆ ಇನ್ನೂ ಕಡಿಮೆ ಇದೆ. ಇ-ಕಾಮರ್ಸ್ ಕಂಪನಿಗಳು ಒಂದು ಲೀಟರ್ ಎಣ್ಣೆ ಮೇಲೆ ಶೇ.5ರಿಂದ ಶೇ.10ರಷ್ಟು ರಿಯಾಯಿತಿ ನೀಡುತ್ತಿವೆ. ಇನ್ನು ಆನ್‌ಲೈನ್‌ನಲ್ಲಿ ಫಾರ್ಚೂನ್ ಬ್ರಾಂಡ್‌ನ 15 ಲೀಟರ್ ಸೂರ್ಯಕಾಂತಿ ಎಣ್ಣೆಯ ಟಿನ್ ಬೆಲೆ 1,452 ರೂ. ಇದ್ದರೆ, ಹಿಮಾನಿ ಕಂಪನಿಯ 15 ಲೀಟರ್ ಸೂರ್ಯಕಾಂತಿ ಎಣ್ಣೆ ಟಿನ್ ಬೆಲೆ 1,225 ರೂ. ಇದೆ. ಖಾದ್ಯ ತೈಲದ ಬೆಲೆ ಮತ್ತು ರಿಯಾಯಿತಿ ಒಂದು ವೆಬ್‌ಸೈಟ್‌ನಿಂದ ಮತ್ತೊಂದು ವೆಬ್‌ಸೈಟ್ ಅಥವಾ ಆ್ಯಪ್‌ಗೆ ವಿಭಿನ್ನವಾಗಿದೆ.

ಡಿಸೆಂಬರ್ ವೇಳೆಗೆ ಮತ್ತಷ್ಟು ಇಳಿಕೆ

ಉತ್ತರ ಪ್ರದೇಶ ಸೇರಿದಂತೆ ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲೆಕ್ಷನ್ ವೇಳೆ ಸಾರ್ವಜನಿಕರ ಕೋಪ ತಣಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಖಾದ್ಯ ತೈಲದ ಬೆಲೆ ನಿಯಂತ್ರಿಸಿದೆ ಎಂದು ಹೇಳಲಾಗಿದೆ. ವಾರದ ಹಿಂದೆ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಕೇಂದ್ರ ಸರ್ಕಾರ, ಕಚ್ಚಾ ಅಡುಗೆ ಎಣ್ಣೆ ಮೇಲಿನ ಕಸ್ಟಮ್ ಸುಂಕವನ್ನು ಇಳಿಕೆ ಮಾಡಿದೆ. ಇದರೊಂದಿಗೆ ‘ರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್’ ಎಂಬ ಹೊಸ ಯೋಜನೆ ಆರಂಭಿಸಿರುವ ಸರ್ಕಾರ, ಈ ಮೂಲಕ ಅಡುಗೆ ಎಣ್ಣೆಯ ದೇಶೀಯ ಉತ್ಪಾದನೆ ಹೆಚ್ಚಿಸಲು ದಿಟ್ಟ ಹೆಜ್ಜೆ ಇರಿಸಿದೆ. ಪರಿಣಾಮ ಈ ವರ್ಷ ಡಿಸೆಂಬರ್ ವೇಳೆಗೆ ಅಡುಗೆ ತೈಲದ ಬೆಲೆ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಈ ಹೊಸ ಯೋಜನೆಗಾಗಿ 11,040 ಕೋಟಿ ರೂ. ಹೂಡಿಕೆ ಮಾಡುವುದಾಗಿ ಕೇಂದ್ರ ತಿಳಿಸಿದೆ. ಈ ಮೂಲಕ ‘ಚುನಾವಣೆ ಹಿನ್ನೆಲೆಯಲ್ಲಿ ಬೆಲೆ ಇಳಿಕೆ’ ಎಂಬ ಆರೋಪಿಸಿದವರಿಗೆ ಉತ್ತರ ನೀಡಿದೆ.

ಪಾರದರ್ಶಕತೆಗೆ ಕ್ರಮ

ಅಲ್ಲದೆ, ಖಾದ್ಯ ತೈಲ ಬೆಲೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ದೇಶದಲ್ಲಿ ವಾರಕ್ಕೊಮ್ಮೆ ಖಾದ್ಯ ತೈಲಗಳು/ಎಣ್ಣೆ ಬೀಜಗಳ ದಾಸ್ತಾನು ಮೇಲ್ವಿಚಾರಣೆ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಇದಕ್ಕೆಂದೇ ಪ್ರತ್ಯೇಕ ವೆಬ್ ಪೋರ್ಟಲ್ ಆರಂಭಿಸಲಿದೆ. ಮಿಲ್ಲರ್‌ಗಳು, ರಿಫೈನರ್‌ಗಳು, ದಾಸ್ತಾನುದಾರರು ಮತ್ತು ಸಗಟು ವ್ಯಾಪಾರಿಗಳು ಈ ಪೋರ್ಟಲ್‌ಗೆ ಪ್ರತಿ ದಿನ ಡೇಟಾ ಅಪ್‌ಡೇಟ್ ಮಾಡಲಿದ್ದಾರೆ. ನ್ಯಾಯಯುತ ಬೆಲೆ ಖಚಿತಪಡಿಸಿಕೊಳ್ಳÄವ ನಿಟ್ಟಿನಲ್ಲಿ ಚಿಲ್ಲರೆ ಬೆಲೆ ಪ್ರದರ್ಶಿಸುವಂತೆ ರಾಜ್ಯಗಳಿಗೆ ನಿರ್ದೇಶನ ಕೂಡ ನೀಡಲಾಗಿದೆ.

ಇಳಿಕೆಯಾದ ಸುಂಕವೆಷ್ಟು?

ಖಾದ್ಯ ತೈಲ ಬೆಲೆ ಇಳಿಕೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಕಸ್ಟಮ್ಸ್ ಸುಂಕವನ್ನು ಮತ್ತಷ್ಟು ಕಡಿಮೆ ಮಾಡಿದೆ. ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆಯ ಮೇಲಿನ ಸುಂಕ ಶೇ.2.5ರಷ್ಟು ಕಡಿಮೆಯಾಗಿದ್ದು, ಸಂಸ್ಕರಿಸಿದ ತಾಳೆ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು ಶೇ. 32.5ಕ್ಕೆ ಇಳಿಕೆ ಮಾಡಿದೆ. ಸೆಪ್ಟೆಂಬರ್ 11 ರಿಂದಲೇ ಈ ಕ್ರಮ ಜಾರಿಗೆ ಬಂದಿದ್ದು, ಇದರಿಂದ ದೈನಂದಿನ ಸಗಟು ಬೆಲೆಯಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ. ಸುಂಕ ಇಳಿಕೆಯಿಂದ ಸರ್ಕಾರದ ಮೇಲೆ 4,500 ಕೋಟಿ ರೂ. ಹೊರೆ ಬೀಳಲಿದೆ!