News

ಜಿಟಿಜಿಟಿ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತಾಗಿದೆ ಹೆಸರು ಉದ್ದು ಬೆಳೆದ ರೈತರ ಪರಿಸ್ಥಿತಿ

14 August, 2020 10:20 AM IST By:

ಕಲ್ಯಾಣ ಕರ್ನಾಟಕದಲ್ಲಿ ಗುರುವಾರ ಇಡೀ ದಿನ ಸುರಿದ ಜಿಟಿಜಿಟಿ ಮಳೆಯಿಂದಾಗಿ ಹೆಸರು ರಾಶಿ ಮಾಡುತ್ತಿರುವ ರೈತರಿಗೆ ಅಪಾರ ಹಾನಿಯಾಗಿದೆ.

ಹೊಲದಲ್ಲಿ ನೀರು ನಿಂತು ಬೆಳೆ ಹಾನಿ (Crop damage) ಯಾಗಿದೆ. ಈ ವರ್ಷ ಉತ್ತಮ ಮುಂಗಾರು ಸುರಿದಿದ್ದರಿಂದ ಖುಷಿಯಲ್ಲಿದ್ದ ರೈತರು ಹೆಸರು, ಉದ್ದು ಬಿತ್ತನೆ ಮಾಡಿದ್ದರು. ಸಮೃದ್ಧವಾಗಿ ಬೆಳೆದ ಹೆಸರು ಬೆಳೆ ಇನ್ನೇನು ಕಾಯಿಬಿಡಿಸಿ ರಾಶಿ ಮಾಡಿಕೊಳ್ಳಬೇಕೆಂದು ಖುಷಿಯಲ್ಲಿದ್ದರು. ಆದರೆ  ಗುರುವಾರ ಇಡೀ ದಿನ ಜಿಟಿಜಿಟಿ ಮಳೆ ಸುರಿಯಿತು. ಶುಕ್ರವಾರವೂ ಸಹ ಮೋಡ ಕವಿದ ವಾತಾವರಣವಿದ್ದರಿಂದ ಹೆಸರು ಉದ್ದು ಬೆಳೆದ ರೈತರಲ್ಲಿ ಆತಂಕ ಮನೆ ಮಾಡಿದೆ. ಕೆಲವು ರೈತರು ಹೆಸರು ಬಿಡಿಸಿ ರಾಶಿ ಮಾಡಲು ಮುಂದಾಗಿದ್ದರು. ಆದರೆ ಗುರುವಾರ ಇಡೀ ದಿನ ಸುರಿದ ಜಿಟಿಜಿಟಿ ಮಳೆಯಿಂದ ಹೆಸರು ಕೊಳೆಯುವ ಸಾಧ್ಯತೆಯಿದೆ. ರಾಶಿ ಸಮಯದಲ್ಲಿ ಸ್ವಲ್ಪ ಮಳೆಯಾದರೆ ಸಾಕು, ಹೆಸರು ಉದ್ದು ನೆಲಪಾಲಾಗುತ್ತದೆ. ಇಲ್ಲವೇ ಅಲ್ಲೇ ಮೊಳಕೆಯೊಡೆದು ಅಪಾರ ಹಾನಿಯಾಗುವ ಸಾಧ್ಯತೆಯಿರುತ್ತದೆ.

ಬಿಸಿಲಿಗಾಗಿ ಪ್ರಾರ್ಥನೆ:

ಹೆಸರು ರಾಶಿ ಮಾಡುವಾಗ ಬಿಸಿಲಿರಬೇಕು. ಇಲ್ಲದಿದ್ದರೆ ರಾಶಿ ಮಾಡಲು ಅಸಾಧ್ಯ.ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂದು ಸೇಡಂ ತಾಲೂಕಿನ ರೈತ ರಾಜಕುಮಾರ ರಾಠೋಡ ಅಳಲು ವ್ಯಕ್ತಪಡಿಸಿದರು.  ಈ ವರ್ಷ ಉತ್ತಮ ಮುಂಗಾರು ಆಗಿದ್ದರಿಂದ ಬಂಗಾರದಂತಹ ಬೆಳೆ ಬಂದಿದೆ. ಎಲ್ಲಾ ಕಡೆ ಹೆಸರು ಕಾಯಿ ಬಿಡಿಸಲಾಗುತ್ತಿದೆ.ಆದರೆ ಜಿಟಿಜಿಟಿ ಮಳೆಯಿಂದಾಗಿ ಹೆಸರು ಕಾಯಿ ಬಿಡಿಸಲಾಗುತ್ತಿಲ್ಲ. ರಾಶಿಯೂ ಮಾಡಕ್ಕಾಗುತ್ತಿಲ್ಲ. ಬಿಸಿಲಿಗೆ ಒಣಗಿಸಿದರೆ ಮಾತ್ರ ಹೆಸರು ರಾಶಿಯಾಗುತ್ತದೆ. ಈಗೆ ಮನೆಯಲ್ಲಿ ಕೂಡಿಟ್ಟರೆ ಅಲ್ಲೇ ಮೊಳಕೆಯೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ ರಾಠೋಡ್.

ಭೀಮಾ ನದಿಗೆ 15000 ಕ್ಯೂಸೆಕ್ಸ್ ನೀರು ಬಿಡುಗಡೆ-ಸೊನ್ನ ಬ್ಯಾರೇಜಿನ ಕೆಳಗಡೆ ಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚನೆ

ಮಹಾರಾಷ್ಟ್ರದ ವೀರ ಡ್ಯಾಂ ಸಂಪೂರ್ಣವಾಗಿ ತುಂಬಿರುವ ಹಿನ್ನೆಲೆಯಲ್ಲಿ ಆಗಸ್ಟ್ 13 ಸುಮಾರು 15,000 ಕ್ಯೂಸೆಕ್ ನೀರು ಭೀಮಾ ನದಿಗೆ (Bhima river) ಬಿಡುಗಡೆ ಮಾಡಲಾಗಿದ್ದು, ಶುಕ್ರವಾರ ಜಿಲ್ಲೆಯ ಸೊನ್ನ ಬ್ಯಾರೇಜಿಗೆ (Dam) ನೀರು ತಲುಪುವ ಸಾಧ್ಯತೆಯಿದೆ ಎಂದು ಭೀಮಾ ಏತ ನೀರಾವರಿ ಯೋಜನೆಯ ಅಫಜಲಪುರ ವಿಭಾಗದ ಕಾರ್ಯಪಾಲಕ ಅಭಿಯಂತರಾದ ಅಶೋಕ್ ಕಲಾಲ್ ತಿಳಿಸಿದ್ದಾರೆ.

ಇದಲ್ಲದೆ ವೀರ ಡ್ಯಾಂದಿಂದ ಇನ್ನೂ ಹೆಚ್ಚಿನ ನೀರು ಬಿಡುವ ಸಾಧ್ಯತೆ ಇದೆ. ಸೊನ್ನ ಬ್ಯಾರೇಜಿಗೆ ಬರುವ ಒಳಹರಿವಿನ ಪ್ರಮಾಣದಷ್ಟೆ ನೀರು ಅಂದಾಜು 12000 ರಿಂದ 15000 ಕ್ಯೂಸೆಕ್ಸ್ ನೀರು ನದಿಗೆ ಹರಿಬಿಡಲಾಗುವುದರಿಂದ ಬ್ಯಾರೇಜಿನ ಕೆಳಗಡೆ ಬರುವ ಅಫಜಲಪುರ, ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕುಗಳ ನದಿ ದಡದಲ್ಲಿರುವ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕು. ತಮ್ಮ ಜಾನುವಾರುಗಳನ್ನು ಸುರಕ್ಷತೆಯಿಂದ ಇಟ್ಟುಕೊಳ್ಳಬೇಕು. ಅದೇ ರೀತಿ ಸೊನ್ನ ಬ್ಯಾರೇಜಿನ ಕೆಳಗಡೆ ಬರುವ ಇನ್ನುಳಿದ ಬ್ಯಾರೇಜ್‍ಗಳ ಅಧಿಕಾರಿಗಳು ಸಹ ಮುಂಜಾಗ್ರತಾ ಕ್ರಮವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.