ರಾಜ್ಯದಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿ ಆಗುತ್ತಿವೆ.
ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದ ಹಲವು ಭಾಗದಲ್ಲಿ ಧಾರಾಕಾರ ಮಳೆ ಆಗಿರುವುದು ವರದಿ ಆಗಿದೆ.
ಸೋಮವಾರ ಹಾಗೂ ಮಂಗಳವಾರ ಕರಾವಳಿಯ ಎಲ್ಲ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ,
ಕೊಡಗು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಅಲ್ಲದೇ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ,
ಹಾಸನ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಮುಂದಿನ 48 ಗಂಟೆಯ ಅವಧಿ: ಕರಾವಳಿಯ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗಲಿದೆ.
ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ
ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬಿರುಗಾಳಿ ಮುನ್ನೆಚ್ಚರಿಕೆ: ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯು ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ.
ಮೀನುಗಾರರಿಗೆ ಎಚ್ಚರಿಕೆ: ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40ರಿಂದ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ
ಬೀಸುವ ವಾತಾವರಣವಿರುತ್ತದೆ. ಹೀಗಾಗಿ, ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ: ಬೆಂಗಳೂರು ನಗರ ಹಾಗೂ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ
ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಕೆಲವೊಮ್ಮೆ ಬಲವಾದ ಮೇಲ್ಮೈ ಸುಳಿಗಾಳಿ ಬೀಸುವ ಸಾಧ್ಯತೆ ಇದೆ.
ಗರಿಷ್ಠ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು
ಭಾರತೀಯ ಹವಾಮಾನ ಇಲಾಖೆ ವರದಿ ಮುನ್ಸೂಚನೆ ನೀಡಿದೆ.
ಕಳೆದ 24 ಗಂಟೆಯ ಅವಧಿಯಲ್ಲಿ ಭಾರೀ ಮಳೆ: ಕಳೆದ 24 ಗಂಟೆಯ ಅವಧಿಯಲ್ಲಿ ಉತ್ತರ ಕನ್ನಡದ ಕ್ಯಾಸಲ್ ರಾಕ್‌ನಲ್ಲಿ ಬರೋಬ್ಬರಿ 28 ಸೆಂ.ಮೀ ಮಳೆಯಾಗಿದೆ.
ಕೊಡಗಿನ ಭಾಗಮಂಡಲದಲ್ಲಿ 24 ಸೆಂ.ಮಿ, ಉಡುಪಿಯ ಕಾರ್ಕಳದಲ್ಲಿ 23 ಸೆಂ.ಮೀ, ಮೂಲ್ಕಿ ಹಾಗೂ ಉಡುಪಿಯಲ್ಲಿ
ತಲಾ 22 ಸೆಂ.ಮೀ ಮಳೆಯಾಗಿರುವುದು ವರದಿ ಆಗಿದೆ.
ಇನ್ನು ಬೆಳ್ತಂಗಡಿ, ಜಗಲಬೆಟ್, ಕೊಟ್ಟಿಗೆಹಾರದಲ್ಲಿ ತಲಾ 17 ಸೆಂ.ಮೀ ಮಳೆಯಾಗಿದೆ.
ಸುಬ್ರಹ್ಮಣ್ಯ, ಗೇರುಸೊಪ್ಪದಲ್ಲಿ ತಲಾ 16 ಸೆಂ.ಮೀ ಮಳೆಯಾಗಿದೆ.
ಉಪ್ಪಿನಂಗಡಿ, ಮಾಣಿಯಲ್ಲಿ ತಲಾ 15 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ,
ಧರ್ಮಸ್ಥಳ, ಪುತ್ತೂರು, ಲಿಂಗನಮಕ್ಕಿಯಲ್ಲಿ ತಲಾ 14 ಸೆಂ.ಮೀ ಮಳೆಯಾಗಿದೆ.
ಪಣಂಬೂರು, ಸುಳ್ಯ, ಸಿದ್ದಾಪುರ, ನಾಪ್ಲೋಕ್ಲುದಲ್ಲಿ ತಲಾ 13 ಸೆಂ.ಮೀ ಮಳೆಯಾಗಿದೆ.
ಕುಮಟಾ, ಜಯಪುರ ಹಾಗೂ ಕಳಸಾದಲ್ಲಿ ತಲಾ 12 ಸೆಂ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
photo courtesy: Pexels