News

ಹಣ ಪಡೆದು ಸೈಟ್ ಕೊಡದ ಡೆವಲಪರ್ಸ್ ಗೆ ಬಡ್ಡಿ ಸಮೇತ ಹಣ ಹಿಂದಿರುಗಿಸಲು ಗ್ರಾಹಕರ ಆಯೋಗ ಆದೇಶ

31 May, 2023 2:05 PM IST By: Maltesh
consumer court order About Site Developers Case

ಹಣ ಪಡೆದು ಸೈಟ್‌ ನೀಡದೇ ಸತಾಯಿಸಿದ ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ಗೆ ಜಿಲ್ಲಾ ಗ್ರಾಹಕರ ಆಯೋಗ ಬಡ್ಡ ಸಮೇತ ಹಣ ಪಾವತಿಸುವಂತೆ ಆದೇಶ ಮಾಡಿರುವ ಪ್ರಕರಣ ಧಾರವಾಡದಲ್ಲಿ ಜರುಗಿದೆ.

ಧಾರವಾಡ ರಾಜನಗರದ ನಿವಾಸಿ ವಿಶ್ವನಾಥ ನರೇಂದ್ರ ಎನ್ನುವವರು  ಧಾರವಾಡದ ಬಾಲಾಜಿ ಡೆವಲಪರ್ಸ್ ಮತ್ತು ಬಿಲ್ಡರ್ಸ್‌ ಅವರ ಹತ್ತಿರ ಜಿಲ್ಲೆಯ ಇಟ್ಟಿಗಟ್ಟಿ ಗ್ರಾಮದಲ್ಲಿ ಮಾಡುತ್ತಿದ್ದ ಲೇಔಟ್‍ನ ಪ್ಲಾಟ್ ನಂ.66 ನ್ನು ರೂ.5,28,000/- ಖರೀದಿಸಿದ್ದರು. ಈ ಬಗ್ಗೆ ಅವರು ರೂ.1,70,000/- ಮುಂಗಡ ಹಣ ಕಟ್ಟಿ 2014 ರಲ್ಲೆ ಖರೀದಿ ಕಾನೂನು ಒಪ್ಪಂದ ಪತ್ರ ಮಾಡಿಕೊಂಡಿದ್ದರು.

ಒಪ್ಪಂದ ಪತ್ರದಲ್ಲಿ ಉಲ್ಲೇಖಿಸಿದಂತೆ ಉಳಿದ ಹಣವನ್ನು ಸೈಟ್‌ ಅಭಿವೃದ್ಧಿಯಾದ 30 ದಿನಗಳ ಒಳಗೆ ಪಾವತಿ ಮಾಡುವಂತೆ ಇದ್ದರೂ ಸಹ, ಎದುರುದಾರರು ಹಲವಾರು ವರ್ಷ ಕಳೆದರೂ ಎದುರುದಾರರು  ಲೇಔಟ್ ಅಭಿವೃದ್ದಿಗೊಳಿಸಿರಲಿಲ್ಲ. ಅಲ್ಲದೇ ಒಪ್ಪಂದದಂತೆ ದೂರುದಾರರಿಗೆ ಆ ಸೈಟಿನ ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ.

8 ವರ್ಷಗಳಾದರೂ ದೂರುದಾರರಿಗೆ ಮುಂಗಡ ಹಣವನ್ನೂ ಸಹ ಎದುರುದಾರರು ಹಿಂದಿರುಗಿಸಿರಲಿಲ್ಲ. ಬಾಲಾಜಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‍ನ ಅಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ಮೇಲೆ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ.ಬೋಳಶೆಟ್ಟಿ ಹಾಗೂ ಪ್ರಭು.ಸಿ. ಹಿರೇಮಠ 2014ರಲ್ಲಿ ದೂರುದಾರನಿಂದ ಹಣ ಪಡೆದುಕೊಂಡು ಅದನ್ನು ಲೇಔಟ್ ನಿರ್ಮಾಣ ಮಾಡದೇ ತಮ್ಮ ಕೆಲಸಕ್ಕೆ ಎದುರುದಾರರು ಉಪಯೋಗಿಸಿಕೊಂಡಿದ್ದಾರೆ. 

ಅವರು  ದೂರು ದಾಖಲಿಸುವವರೆಗೆ ದೂರುದಾರರ ಹಣ ಹಿಂದಿರುಗಿಸದೇ ಇರುವುದು ತಪ್ಪು ಅಂತಾ ಮಾನ್ಯ ಆಯೋಗ ತೀರ್ಪು ನೀಡಿ ದೂರುದಾರರಿಗೆ ಅವರು ನೀಡಿದ ಹಣ ರೂ.1,70,000/- ಮತ್ತು ಅದರ ಮೇಲೆ ದಿ:06/01/2014 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.9 ರಂತೆ ಬಡ್ಡಿ ಲೆಕ್ಕ ಹಾಕಿಕೊಡುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/-ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಬಾಲಾಜಿ ಡೆವಲಪರ್ಸ್‍ನ ಮ್ಯಾನೆಜಿಂಗ್ ಪಾರ್ಟ್‍ನರ್ ಹನುಮರೆಡ್ಡಿ ಮಾಸ್ತಿ ರವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.