ರಾಜ್ಯ ವಿಧಾನಸಭೆಯಿಂದ ಜೂನ್ 19ರಂದು ನಡೆಯಲಿರುವ ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆ ಚುನಾವಣೆಗೆ ಅಧಿಕೃತ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಿದೆ.
ಕಾಂಗ್ರೆಸ್ ಗೆ ರಾಜ್ಯಸಭೆಯಲ್ಲಿ ಮೋದಿ ಸರಕಾರವನ್ನು ಎದುರು ಹಾಕಿಕೊಳ್ಳುವ ಸಾಮರ್ಥ್ಯವುಳ್ಳ ಅನುಭವಿ ನಾಯಕರ ಅಗತ್ಯವಿದ್ದು, ಅದಕ್ಕಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಅಯ್ಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಮೇಲ್ಮನೆ ಪ್ರವೇಶಿಸುವುದು ಬಹತೇಕ ಖಚಿತವಾಗಿದೆ. ಖರ್ಗೆ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈಗ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ.
ರಾಜ್ಯಸಭೆ ಚುನಾವಣೆಗೆ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಪೈಪೋಟಿ ಶುರುವಾಗಿತ್ತು. ಕಾಂಗ್ರೆಸ್ ನಾಯಕರಾದ ಬಿ.ಕೆ ಹರಿಪ್ರಸಾದ್ ಮತ್ತು ರಾಜೀವ್ ಗೌಡ ಅವರಿಂದ ಎರಡು ಸ್ಥಾನಗಳು ತೆರವಾಗಿತ್ತು. ಈ ಬಾರಿ ಸಂಖ್ಯೆಗಳ ಕೊರತೆಯಿಂದ ಒಂದು ಸ್ಥಾನವನ್ನು ಮಾತ್ರ ಸುಲಭವಾಗಿ ಗೆಲ್ಲಬಹುದಾಗಿದೆ.
ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಗಳಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಉಮೇಶ್ ಜಾಧವ್ ಅವರ ವಿರುದ್ಧ ಸೋಲು ಕಂಡಿದ್ದರು. ಹಾಗಾಗಿ ಸದ್ಯ ರಾಜ್ಯ ಸಭೆ ಮೂಲಕ ದೆಹಲಿ ರಾಜಕೀಯದ ಮೇಲೆ ಖರ್ಗೆ ಕಣ್ಣಿಟ್ಟಿದ್ದಾರೆ.
ಈ ಒಂದು ಸ್ಥಾನಕ್ಕೆ ಬಿ.ಕೆ ಹರಿಪ್ರಸಾದ್ ಮತ್ತು ರಾಜೀವ್‍ಗೌಡ ಮರು ಆಯ್ಕೆ ಬಯಸಿದ್ದರು. ಲೋಕಸಭಾ ಟಿಕೆಟ್ ವಂಚಿತ ಮಾಜಿ ಸಂಸದ ಮುದ್ದಹನುಮೇಗೌಡರು ಕೂಡಾ ಟಿಕೆಟ್‍ಗಾಗಿ ಪ್ರಯತ್ನ ಮಾಡಿದ್ದರು.
ಲೋಕಸಭೆ ಚುನಾವಣೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಆಯ್ಕೆಯಾಗುವ ಇಂಗಿತವನ್ನು ಹೈಕಮಾಂಡ್ ಮುಂದೆ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಅವರು ನಿರಂತರ ಪ್ರಯತ್ನ ಕೂಡ ಮಾಡುತ್ತಿದ್ದರು.ಈಗಿರುವ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಗೆ 1, ಬಿಜೆಪಿಗೆ 2 ಸ್ಥಾನಗಳು ದೊರೆಯುವುದು ಬಹುತೇಕ ಖಚಿತವಾಗಿದೆ. ಮತ್ತೊಂದು ಸ್ಥಾನಕ್ಕಾಗಿ ಕಾಂಗ್ರೆಸ್ – ಜೆಡಿಎಸ್ ನಡುವೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುನ್ನು ಕಂಡಿದ್ದ ಹೆಚ್‍ಡಿ ದೇವೇಗೌಡರವರನ್ನು ಮೈತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಂಭವವಿದೆ.