News

ಶೀಘ್ರ ಸಮೀಕ್ಷೆ ನಡೆಸಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿರಿ:ಸಂಸದ ಡಾ. ಉಮೇಶ್ ಜಾಧವ

14 September, 2021 8:52 PM IST By:

ಕಲಬುರಗಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಆಗಿರುವುದರಿಂದ ಹೆಚ್ಚಿನ ಬೆಳೆ ಹನಿಯಾಗಿದೆ. ಶೀಘ್ರವೇ ಜಂಟಿ ಸಮೀಕ್ಷೆ ಮಾಡಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಳೆ, ಬಿತ್ತನೆ ಕ್ಷೇತ್ರ, ಬೆಳೆ ಹಾನಿ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆಪ್ಟೆಂಬರ್ ನಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ನೀಡುವ ದೂರುಗಳನ್ನು ಎಲ್ಲಾ ಅಧಿಕಾರಿಗಳು ದಾಖಲಿಸಿಕೊಂಡು ಸೂಕ್ತ ಮಾಹಿತಿ ನೀಡಬೇಕು. ಅದಲ್ಲದೆ ಜೇವರ್ಗಿ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿ ಆಗಿದ್ದು, ಶೀಘ್ರವೇ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತರಾಗಿ ಎಂದು ಹೇಳಿದರು.

ಜಿಲ್ಲೆಯ ಇಲ್ಲಿಯವರೆಗೂ ಮಳೆಯಿಂದ ಎಷ್ಟು ಪ್ರಮಾಣದ ಭೂಮಿ ಹಾಗೂ ಬೆಳೆ ಹನಿಯಾಗಿದೆ ಎಂದು ಸಂಸದರು ಮಾಹಿತಿ ಕೇಳಲಾಗಿ, ಜಿಲ್ಲೆಯಲ್ಲಿ 471 ಮಿಲಿ ಮೀಟರ್ ವಾಡಿಕೆ ಮಳೆ ಆಗಬೇಕಾಗಿತ್ತು, ಆದರೆ, 582 ಮಿ.ಮೀ ಹೆಚ್ಚುವರಿ ಮಳೆಯಾಗಿದೆ. ಆಗಸ್ಟ್ ನಲ್ಲಿ 156 ಮಿ.ಮೀ ಮಳೆ ಆಗಬೇಕಿತ್ತು. ಆದರೆ 140 ಮಿ.ಮೀ ಮಳೆ ಆಗಿದೆ. ಇದೇ ರೀತಿಯಾಗಿ ಸೆಪ್ಟೆಂಬರ್ ತಿಂಗಳಲ್ಲಿ 74 ಮಿ.ಮೀ ಮಳೆ ಆಗಬೇಕಿತ್ತು. 95 ಮಿ.ಮೀ ಹೆಚ್ಚುವರಿ ಮಳೆ ಆಗಿರುವುದರಿಂದ 55 ಸಾವಿರ ಹೆಕ್ಟೇರ್ ಪ್ರದೇಶ ಹಾನಿಯಾಗಿದೆ ಎಂದು  ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ್ ಸೂಗೂರು ಅವರು ಉತ್ತರಿಸಿದರು.

ಪ್ರಸಕ್ತ 2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಆರಂಭಗೊAಡಿದ್ದು, ತೊಗರಿ, ಹೆಸರು, ಉದ್ದು, ಹತ್ತಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 7.55 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, 7.48 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಈಗಾಗಲೇ ಬಿತ್ತನೆ ಮಾಡಲಾಗಿದೆ ಎಂದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೂ ಬೆಳೆ ಹಾನಿ ಪರಿಹಾರಕ್ಕಾಗಿ 14 ಸಾವಿರ ದೂರುಗಳು ಬಂದಿದ್ದು, ಅದರಲ್ಲಿ 11 ಸಾವಿರ ದೂರುಗಳನ್ನು ದಾಖಲೆ ಮಾಡಿಕೊಂಡಿದ್ದು, ಇನ್ನು 3 ಸಾವಿರ ದೂರುಗಳು ಬಾಕಿ ಉಳಿದಿದೆ. ಇದಲ್ಲದೆ ಈ ಭಾರಿ 20 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆ ಇದೆ ಎಂದು ಜಿಂಟಿ ಕೃಷಿ ನಿರ್ದೇಶಕರು ಮಾಹಿತಿ ನೀಡಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಂಸದರು ಬೆಳೆ ಪರಿಹಾರ ವಿಮೆ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ಇಲ್ಲ. ಹೀಗಾಗಿ ರೈತರಿಗೆ ಬೆಳೆ ಪರಿಹಾರ ವಿಮೆ ಕುರಿತು ಹೆಚ್ಚಿನ ಪ್ರಚಾರ ಮಾಡಿ. ಇದಲ್ಲದೆ ರೈತರು ದೂರು ಸಲ್ಲಿಸಲು ಜಿಲ್ಲಾ ಕೇಂದ್ರ ಕಚೇರಿ ಹಾಗೂ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರದಲ್ಲಿ ಸಹ ಸಹಾಯವಾಣಿ ತೆರೆಯಿರಿ ಎಂದು ಸಂಸದರು ಅಧಿಕಾರಿಗಳಿಗೆ ತಿಳಿಸಿದರು.

ಬಿತ್ತನೆ ಬೀಜ ಬೇಡಿಕೆ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು ಅವರು ಇದೇ ಸಂದರ್ಭದಲ್ಲಿ ಎಂದರು. ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಬೆಳೆ ಪರಿಹಾರ, ಬಿತ್ತನೆ ಬೀಜ ಹಂಚಿಕೆ ಸೇರಿದಂತೆ ಹಲವಾರು ಯೋಜನೆಗಳ ಪರಿಹಾರ ಲಭಿಸುವಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸಂಸದರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಸಹಾಯಕ ಆಯುಕ್ತರಾದ ಮೋನಾ ರೂಟ್ ಹಾಗೂ ಅಶ್ವಿಜಾ,  ಎಲ್ಲಾ ತಾಲೂಕುಗಳ ತಹಸೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ವಿಮೆ ಕಂಪನಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.