ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ (ಹನುಮನಮಟ್ಟಿ) ವತಿಯಿಂದ "ಮುಂಗಾರು ಹಂಗಾಮಿನ ಬೆಳೆಗಳಲ್ಲಿ ಸಮಗ್ರ ಕಳೆ ನಿರ್ವಹಣೆ" ಕುರಿತು ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಮುಂಗಾರು ಹಂಗಾಮಿನ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಳೆ ಗಿಡಗಳ ನಾಶ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ರೈತ ಬಾಂಧವರಿಗೆ ಸಮಗ್ರ ಮಾಹಿತಿ ನೀಡುವುದು ಮತ್ತು ಅವರ ಪ್ರಶ್ನೆಗಗಳಿಗೆ ಉತ್ತರಿಸಿ ಅನುಮಾನಗಳನ್ನು ಪರಿಹರಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ.ಅಶೋಕ ಪಿ. ಅವರು, ಮುಂಗಾರು ಹಂಗಾಮು ಋತುವಿನಲ್ಲಿ ಕಳೆ ನಿರ್ವಹಣೆ ಮಾಡುವುದು ರೈತರು ಎದುರಿಸುವ ಜಟಿಲ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಬಗ್ಗೆ ರೈತರು ಸರಿಯಾದ ಪದ್ಧತಿ, ತಂತ್ರಜ್ಞಾನ ಅಳವಡಿಸಿಕೊಂಡು, ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಬೆಳೆ ಯಾವುದೇ ಇರಲಿ ಸಕಾಲದಲ್ಲಿ ಕಳೆ ನಿಯಂತ್ರಿಸುವುದು ಅತಿ ಮುಖ್ಯ ಎಂದರು.
ಬೀಜ ಬಿತ್ತಿದ ಸುಮಾರು 30 ದಿನಗಳ ನಂತರ ಎಡೆಕುಂಟೆ ಹೊಡೆದು, ಕೈಗಳೆ ಮಾಡಿದರೆ ಅಲ್ಲಿಗೆ ಕಳೆ ತೆಗೆಯುವ ಕಾರ್ಯ ಮುಗಿದಂತೆ ಎಂಬ ಭಾವನೆ ರೈತರಲ್ಲಿದೆ. ಆದರೆ, ಕಳೆಗಳು ಬೆಳೆ ಜೊತೆಗೇ ಬೆಳೆದು, ನೀರು ಹಾಗೂ ಪೋಷಕಾಂಶಗಳಿಗಾಗಿ ಪೈಪೋಟಿ ನಡೆಸಿ ಬೆಳೆಯ ಬೆಳವಣಿಗೆ ಕ್ಷೀಣಿಸುತ್ತವೆ. ಪರಿಣಾಮವಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಬೆಳೆಗೆ ಕೀಟ ಹಾಗೂ ರೋಗ ಬಂದಾಗ, ಕೀಟನಾಶಕ ಅಥವಾ ರೋಗ ನಾಶಕ ಸಿಂಪಡಿಸಲು ತರಾತುರಿ ಮಾಡುವ ರೈತರು, ಕಳೆಗಳು ಮಾಡುವ ಹಾನಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆ-ಬೆಳೆ ಸ್ಪರ್ಧೆ
ಕೀಟ ಹಾಗೂ ರೋಗ ಬಾಧೆಗಳಿಗೆ ಲಕ್ಷಣಗಳು ಇರುವಂತೆ ಕಳೆಗಳಿಂದ ಆಗುವ ಹಾನಿಯ ಲಕ್ಷಣಗಳು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ. ಅದರಲ್ಲೂ ಎಡೆಕುಂಟೆ ಹೊಡೆಯುವ ಹಾಗೂ ಕೈಗಳೆ ಮಾಡುವ ಸಮಯದಲ್ಲಿ ಬರುವ ಅಕಾಲಿಕ ಮಳೆಗಳಿಂದ ಹಾಗೂ ಕೃಷಿ ಕಾರ್ಮಿಕರ ಅಲಭ್ಯತೆಯಿಂದ ಕಳೆ ತೆಗೆಯುವ ಕೆಲಸವನ್ನು ರೈತರು ಮುಂದಕ್ಕೆ ಹಾಕುತ್ತಾರೆ. ಇದರಿಂದ ಇಳುವರಿ ಕುಸಿಯುತ್ತದೆ. ಹೀಗಾಗಿ ಕಳೆ-ಬೆಳೆ ನಡುವಿನ ಸ್ಪರ್ಧೆ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ತಿಳಿಸಿದರು.
ಕಳೆ ನಾಶಕ ಸಿಂಪಡಿಸಿ
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಮಗ್ರ ಕೃಷಿ ಪದ್ಧತಿಗಳ ಕುರಿತಾದ ಅಖಿಲ ಭಾರತ ಸಂಘಟಿತ ಸಂಶೋಧನಾ ವಿಭಾಗದ ಮುಖ್ಯಸ್ಥರು ಮತ್ತು ಬೇಸಾಯ ಶಾಸ್ತ್ರಜ್ಞರಾದ ಡಾ.ಸಂಜಯ್. ಎಂ.ಟಿ ಅವರು ಮಾತನಾಡಿ, ಕಳೆ ನಿಯಂತ್ರಣ ಮಾಡುವ ಸಮಯದಲ್ಲಿ ಹವಾಮಾನ ವೈಪರೀತ್ಯ ಉಂಟಾದಾಗ ಕೈಗಳೆ ಅಥವಾ ಅಂತರ ಬೇಸಾಯ ಸಾಧ್ಯವಾಗುವದಿಲ್ಲ. ಈ ಅನಿಶ್ಚಿತ ಪರಿಸ್ಥಿತಿಯನ್ನು ಹೋಗಲಾಡಿಸಲು ಬಿತ್ತಿದ ತಕ್ಷಣ ಮಣ್ಣಿನ ಮೇಲೆ ಕಳೆ ನಾಶಕ ಸಿಂಪಡಿಸುವ ಮೂಲಕ ಕಳೆಗಳ ನಿಯಂತ್ರಣ ಮಾಡಬೇಕು. ಕಳೆಯನ್ನು ಸಮರ್ಥವಾಗಿ ನಿಯಂತ್ರಿಸುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದಲ್ಲದೆ ಬೇಸಾಯದ ಖರ್ಚನ್ನು ಕಡಿಮೆ ಮಾಡಬಹುದು. ಬಿತ್ತುವ ಸಮಯದಲ್ಲಿ ಕಳೆನಾಶಕಗಳನ್ನು ಮಣ್ಣಿನ ಮೇಲೆ ಸಿಂಪಡಿಸುವುದರಿಂದ ಕಳೆಗಳು ಹುಟ್ಟುವ ಮುನ್ನವೇ ಸಾಯುತ್ತವೆ. ಹೀಗಾಗಿ ಕಳೆ ಕೀಳಲು ಕೃಷಿ ಕಾರ್ಮಿಕರನ್ನು ಅವಲಂಬಿಸುವ ಸಂದರ್ಭ ಬರುವುದಿಲ್ಲ. ಜೊತೆಗೆ ಕಳೆ ಗಿಡಗಳು ಹೂ ಬಿಟ್ಟು ಬೀಜ ಉತ್ಪತ್ತಿ ಮಾಡುವ ಮೊದಲೇ ನಾಶ ಹೊಂದುವುದರಿಂದ ಅವುಗಳ ಪ್ರಸಾರ ಕಡಿಮೆಯಾಗುತ್ತದೆ. ಕಳೆಗಳಿಂದ ಉಂಟಾಗುವ ಮಣ್ಣಿನ ತೇವಾಂಶದ ಕೊರತೆ ಉದ್ಭವವಾಗುವದಿಲ್ಲ ಮತ್ತು ಬೆಳೆಗೆ ಹಾಕಿದ ರಸಗೊಬ್ಬರದ ಸಮರ್ಥ ಬಳಕೆಯಾಗಿ, ಆರೋಗ್ಯಕರ ಫಸಲು ಲಭ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಅಂತರ ಬೇಸಾಯ ಸಾಧ್ಯವಿಲ್ಲದ ಬೆಳೆಯ ಸಾಲಿನಲ್ಲೂ ಕಳೆ ನಾಶಕಗಳಿಂದ ಕಳೆ ನಿಯಂತ್ರಣ ಮಾಡಬಹುದು. ಇದರೊಂದಿಗೆ ಬೆಳೆಗಳಿಗೆ ತಗುಲುವ ರೋಗ ಹಾಗೂ ಕೀಟಗಳ ಬಾಧೆಯ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗುವುದರಿಂದ ಬೆಳೆ ಸಂರಕ್ಷಣಾ ವೆಚ್ಚವೂ ಕಡಿಮೆಯಾಗುತ್ತದೆ ಎಂದರು. ಕಾರ್ಯಾಗಾರದಲ್ಲಿ 70ಕ್ಕೂ ಹೆಚ್ಚು ರೈತರು ಭಾಗವಹಿಸಿ ತರಬೇತಿ ಪ್ರಯೋಜನ ಪಡೆದರು.
ಕಳೆನಾಶಕ ಬಳಸುವಾಗ ಇದು ಗಮನದಲ್ಲಿರಲಿ
- ಕಳೆನಾಶಕಗಳನ್ನು ಕೈಪಂಪುಗಳಿಂದ ಮಾತ್ರ ಸಿಂಪಡಿಸಿ.
- ಪ್ರತಿ ಎಕರೆಗೆ 300 ಲೀಟರ್ ಸಿಂಪರಣೆ ದ್ರಾವಣ ಉಪಯೋಗಿಸಬೇಕು. ಕಳೆನಾಶಕಗಳನ್ನು ಸಿಂಪಡಿಸುವಾಗ ಭೂಮಿಯಲ್ಲಿ ಸಾಕಷ್ಟು ತೇವಾಂಶ ಇರಬೇಕು.
- ಬಿತ್ತನೆಗಾಗಿ ಸಿದ್ಧಗೊಂಡ ಜಮೀನಿನಲ್ಲಿ ಹೆಂಟೆಗಳು ಇರಬಾರದು ಮತ್ತು ಕಳೆನಾಶಕ ಸಿಂಪಡಿಸಿದ ಸ್ಥಳವನ್ನು ತುಳಿದಾಡದೆ, ಸಿಂಪರಣೆ ಮಾಡುತ್ತಾ ಹಿಂದಕ್ಕೆ ಹೋಗಬೇಕು.
- ಆಯಾ ಬೆಳೆಗೆ ಸಿಫಾರಸು ಮಾಡಿದ ಕಳೆನಾಶಕವನ್ನು, ಸಿಫಾರಸು ಮಾಡಿದ ಸಮಯದಲ್ಲೇ ಸಿಂಪರಣೆ ಮಾಡಿ. ಸಂದೇಹ/ ಸಮಸ್ಯೆ ಇದ್ದಲ್ಲಿ ಕಳೆ ತಜ್ಞರನ್ನು ಸಂಪರ್ಕಿಸಿ.
- ರಸಗೊಬ್ಬರ ಹಾಗೂ ಮತ್ತಿತರ ಪರಿಕರಗಳನ್ನು ಬಿತ್ತನೆಗೆ ಮೊದಲೇ ಸಂಗ್ರಹಸುವಂತೆ, ಕಳೆನಾಶಕಗಳನ್ನು ಕೂಡ ಮುಂಚಿತವಾಗಿಯೇ ತಂದಿಟ್ಟುಕೊಳ್ಳಬೇಕು.
- ಬಿತ್ತನೆ ನಂತರ ಕಳೆ ತಜ್ಞರನ್ನು ಸಂಪರ್ಕಿಸುವ ಬದಲು, ಬಿತ್ತನೆಗೆ ಮೊದಲೇ ಸಂಪರ್ಕಿಸಿ ಸಲಹೆ ಪಡೆಯಬೇಕು.