News

ಜೈವಿಕ ವಿಧಾನಗಳ ಮೂಲಕ ಬೆಳೆಗಳಲ್ಲಿನ ಕೀಟ, ರೋಗ ಬಾಧೆಗಳ ಸಮಗ್ರ ಹತೋಟಿ ಸಾಧ್ಯ

19 July, 2021 5:13 PM IST By:

ಒಂದು ಬೆಳೆ ಬೆಳೆಯಬೇಕೆಂದರೆ ಅದಕ್ಕೆ ನೂರಾರು ಅಡತಡೆಗಳು ಬರುತ್ತವೆ. ಅದರಲ್ಲಿಯು ಮುಖ್ಯವಾಗಿ ಶೇ.15-20ರಷ್ಟು ಬೆಳೆಯ ನಷ್ಟ ಉಂಟಾಗುವುದು ವಿವಿಧ ಕೀಟ, ರೋಗ ಹಾಗೂ ಕಳೆಗಳಿಂದ ಎಂದು ಅಂದಾಜಿಸಲಾಗಿದೆ. ಕೀಟಗಳ ಹಾವಳಿ ಹಆಗೂ ರೋಗಗಳ ಬಾಧೆಯನ್ನು ಹತೋಟಿಗೆ ತರಲು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ ಇವುಗಳ ಅತಿಯಾದ ಬಳಕೆಯಿಂದ ಆಹಾರ, ನೀರು, ಗಾಳಿ, ಮಣ್ಣು ಹಾಗೂ ವಾತಾವರಣ ಕಲುಷಿತವಾಗುತ್ತಿದೆ.

ರಾಸಾಯನಿಕಗಳ ಬಳಕೆ ಹೆಚ್ಚಾದಂತೆ ಹಾನಿಕಾರಕ ಕೀಟಗಳಲ್ಲಿ ನೀರೋಧಕ ಶಕ್ತಿ ಬೆಳವಣಿಗೆಯಾಗಿ, ಬೆಳೆಯ ಮಿತ್ರ ಕೀಟಗಳು, ಮಣ್ಣಿನಲ್ಲಿರುವ ಸೂಕ್ಶ್ಮಾಣು ಜೀವಿಗಳು ನಾಶವಾಗುತ್ತಿವೆ. ಹೀಗಾಗಿ ಜೈವಿಕ ವಿಧಾನಗಳ ಮೂಲಕ ಕೀಟಗಳ ಹಾವಳಿ ಹತೋಟಿಗೆ ತರುವ ಕ್ರಮಗಳಿಗೆ ಮಹತ್ವ ಬರುತ್ತಿದೆ. ಜೈವಿಕ ವಿಧಾನದ ಮೂಲಕ ಕೀಟಗಳ ಹಾವಳಿಯನ್ನು ನಿಯಂತ್ರಿಸಲು ಅನೇಕ ಆಯಾಮಗಳಿದ್ದು, ಅವುಗಳನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಉತ್ಪಾದಿಸಿ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ರೈತರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ತೊಗರಿ, ಹೆಸರು, ಉದ್ದು, ಸೋಯಾ ಅವರೆ, ಜೋಳ, ತರಕಾರಿ ಹಾಗೂ ಹಣ್ಣಿನ ಬೆಳೆಗಳಲ್ಲಿ ಬರುವ ಕೀಟ ಪೀಡೆಗಳನ್ನು ನಿಯಂತ್ರಿಸಲು ಇರುವ ಜೈವಿಕ ಹತೋಟಿ ವಿಧಾನಗಳು ಹಾಗೂ ಅವುಗಳ ಸಮರ್ಥ ಬಳಕೆ ಕುರಿತಂತೆ ಬೀದರ್‌ನ ಕೃಷಿ ವಿಜ್ಞಾನ ಕೇಂದ್ರವು ರೈತರಿಗಾಗಿ ‘ಬೆಳೆಗಳಲ್ಲಿ ಕೀಟ ಪೀಡೆಗಳ ಸಮಗ್ರ ಹತೋಟಿಯಲ್ಲಿ ಜೈವಿಕ ವಿಧಾನಗಳು’ ಕುರಿತು ವಿಷಯ ಮಂಡನೆ ಹಾಗೂ ಚರ್ಚೆ ಹಮ್ಮಿಕೊಂಡಿತ್ತು. ಕೃಷಿ ವಿಜ್ಞಾನ ಕೇಂದ್ರವು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ‘ಕೆ.ವಿ.ಕೆ - ಕೃಷಿ ಪಾಠ ಶಾಲೆ’ ಸರಣಿ ಆನ್ ಲೈನ್ ಕಾರ್ಯಕ್ರಮದ ಅಡಿಯಲ್ಲಿ ಈ ಚರ್ಚೆ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೆಶನಾಲಯದ ಮುಖ್ಯ ವಿಜ್ಞಾನಾಧಿಕಾರಿಗಳು ಹಾಗೂ ಜೈವಿಕ ನಿಯಂತ್ರಣ ವಿಭಾಗದ ಮುಖ್ಯಸ್ಥರಾಗಿರುವ ಡಾ. ಅರುಣಕುಮಾರ ಹೊಸಮನಿ ಅವರು, ಬೆಳೆಗಳ ಮೇಲೆ ಹಾವಳಿ ಮಾಡುವ ವಿವಿಧ ಹಾನಿಕಾರಕ ಕೀಟಗಳನ್ನು ಜೈವಿಕ ವಿಧಾನಗಳ ಮೂಲಕ ನಿಯಂತ್ರಿಸುವ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಹಾನಿಕಾರಕ ಕೀಟಗಳನ್ನು ಇಲ್ಲವಾಗಿಸಲು ವಿವಿಧ ಪರತಂತ್ರ, ಪರಭಕ್ಷಕ ಮತ್ತು ಜೈವಿಕ ಶಿಲೀಂದ್ರ ನಾಶಕಗಳ ಉತ್ಪಾದನೆ, ಅದರಲ್ಲೂ ಮುಖ್ಯವಾಗಿ ಟ್ರೆöÊಕೋಗ್ರಾಮ, ಕ್ರಿಪ್ಟೋಲಿಮಸ್, ಮೆಟರೈಝಿಯಂ, ಬೆವೆರಿಯಾ ಮತ್ತು ಲೆಕ್ಯಾನಿಸಿಲಿಯಮ್ ಲೇಕ್ಯಾನಿ ಜೈವಿಕ ಪರಿಕರಗಳ ಬಳಕೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು ಎಂದು ಬೀದರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾಗಿರುವ ಡಾ. ಸುನೀಲಕುಮಾರ ಎನ್.ಎಂ ಅವರು ತಿಳಿಸಿದರು.

ಡಾ. ಅರುಣಕುಮಾರ ಹೊಸಮನಿ ಅವರು ಮಾತನಾಡಿ, ‘ಅತಿಯಾದ ರಾಸಾಯನಿಕಗಳಿಂದ ನಿಸರ್ಗ ಹಾಗೂ ಮಾನವ ಸಂಕುಲದಲ್ಲಿ ಏರುಪೇರು ಆಗಿದ್ದು ಅನೇಕ ದುಷ್ಫರಿಣಾಮ ಹಾಗೂ ಅನಾರೋಗ್ಯದ ಸಮಸ್ಯೆಗಳು ಉಂಟಾಗಿವೆ. ಇವುಗಳ ಸಮರ್ಥ ನಿರ್ವಹಣೆಯಲ್ಲಿ ಜೈವಿಕ ಹತೋಟಿ ವಿಧಾನ ಪ್ರಮುಖ ಅಸ್ತಂವಾಗಬಲ್ಲದು’ ಎಂದರು

‘ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜೈವಿಕ ನಿಯಂತ್ರಣ ವಿಭಾಗ ಹಾಗೂ ಸಾವಯವ ಕೃಷಿ ಘಟಕದಲ್ಲಿ  ಟ್ರೆಕೋಗ್ರಾಮ, ಟ್ರೆಕೊಡರ್ಮಾ, ಮೆಟರೈಝಿಯಂ ರಿಲೈ, ಮೆಟರೈಝಿಯಂ ಅನಿಸೋಪ್ಲಿಯೆ, ಬೆವೆರಿಯಾ ಬ್ಯಾಷಿಯಾನ ಮತ್ತು ಲೆಕ್ಯಾನಿಸಿಲಿಯಮ್ ಲೇಕ್ಯಾನಿ ಜೈವಿಕ ಪರಿಕರಗಳನ್ನು ಉತ್ಪಾದನೆ ಮಾಡುತ್ತಿದ್ದು, ತೊಗರಿ, ಹೆಸರು, ಉದ್ದು, ಸೋಯಾ ಅವರೆ, ಜೋಳ, ತರಕಾರಿ ಹಾಗೂ ಹಣ್ಣಿನ ಬೆಳೆಗಳಲ್ಲಿ ಬರುವ ಕೀಟ ಪೀಡೆಗಳನ್ನು ನಿಯಂತ್ರಿಸಲು ಹಾಗೂ ಕೀಟಗಳನ್ನು ಪರಿಣಾಂಕಾರಿಯಾಗಿ ನಿಯಂತ್ರಿಸಲು ಈ ಪರಿಕರಗಳು ರೈತರಿಗೆ ನೆರವಾಗುತ್ತವೆ’ ಎಂದು ಹೇಳಿದರು. ಹಾಗೇ, ಈ ಕುರಿತು ಸಚಿತ್ರ ಮಾಹಿತಿ ನೀಡುವ ಜೊತೆಗೆ, ಜೈವಿಕ ವಿಧಾನಗಳನ್ನು ಅನುಸರಿಸುವ ಮೂಲಕ ಕೀಟಗಳ ಹಾವಳಿ ನಿಯಂತ್ರಿಸಿ, ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿರುವ ರೈತರ ಯಶೋಗಾಥೆಗಳನ್ನೂ ಕೃಷಿಕರೊಂದಿಗೆ ಹಂಚಿಕೊಂಡರು.

ಇದೇ ವೇಳ ಬೀದರ ಜಿಲ್ಲೆಯ ಹಂದ್ರಾಳ ಗ್ರಾಮದ ರೈತರಾಗಿರುವ ಮಹಾದೇವ ರೆಡ್ಡಿ ಅವರು, ತಾವು ಬೆಳೆದ ಕಬ್ಬಿನ ಬೆಳೆಯಲ್ಲಿ ಕಾಣಿಸಿಕೊಂಡಿದ್ದ ಗೊಣ್ಣೆ ಹುಳುಗಳನ್ನು ನಿಯಂತ್ರಿಸಲು ಮೆಟರೈಝಿಯಂ ಅನಿಸೋಪ್ಲಿಯೆಯನ್ನು ಬೆಲ್ಲ ಹಾಗೂ ಕಡಲೆ ಹಿಟ್ಟಿನೊಂದಿಗೆ ಬಳಸಿ, ಯಶಸ್ವಿಯಾಗಿ ಬೆಳೆ ಉಳಿಸಿಕೊಂಡ ತಮ್ಮ ಅನುಭವವನ್ನು ಹಂಚಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುನೀಲಕುಮಾರ ಎನ್.ಎಂ ಅವರು ನೈಸರ್ಗಿಕ ಸಮತೋಲನ ಕಾಪಾಡುವ ಜೊತೆ ಜೊತೆಗೆ ಕಡಿಮೆ ಕರ್ಚಿನಲ್ಲಿ ಹಾಗೂ ಪರಿಣಾಮಕಾರಿಯಾಗಿ ಕೀಟಗಳ ಹಾವಳಿ ನಿರ್ವಹಣೆ ಮಾಡಲು ಜೈವಿಕ ಪೀಡೆ ನಾಶಕಗಳನ್ನು ಬಳಸಬೇಕು. ಇವುಗಳನ್ನು ವಿವೇಚನೆಯಿಂದ ಬಳಸಿದ್ದೇ ಆದಲ್ಲಿ ಆರೋಗ್ಯಕರ ಕೃಷಿ ಉತ್ಪನ್ನಗಳನ್ನು ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರೈತರಿಗೆ ತಿಳಿವಳಿಕೆ, ಬಳಕೆ ಮತ್ತು ಲಭ್ಯತೆಯ ಕುರಿತು ಮಾಹಿತಿ ನೀಡಲು ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕಲಬುರಗಿ ಹಾಗೂ ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಭಾಗವಹಿಸಿದ್ದ ಸುಮಾರು 55ಕ್ಕೂ ಹೆಚ್ಚು ರೈತ ಬಾಂಧವರು, ತರಬೇತಿಯ ಕೊನೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊAಡರು.