News

ಮಂಗಳವಾರದಿಂದ ಬೆಂಗಳೂರಿನಲ್ಲಿ ಮತ್ತೆ ಒಂದು ವಾರ ಲಾಕ್‌ಡೌನ್‌

12 July, 2020 12:30 PM IST By:

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಾವಿನ ಸಂಖ್ಯೆಯೂ ಸಹ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಈ ಪರಿಸ್ಥಿತಿಯನ್ನು ಹತೋಟಿಗೆ ತರಲು ಮುಂದಾಗಿರುವ ಸರ್ಕಾರಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರ (ಜುಲೈ 14) ರಾತ್ರಿ 8 ಗಂಟೆಯಿಂದ ಇದೇ 22ರ ಬೆಳಿಗ್ಗೆ 5ಗಂಟೆಯವರೆಗೆ ಲಾಕ್‌ಡೌನ್‌ ಘೋಷಿಸಿದೆ.

ವಾರದಿಂದೀಚೆಗೆ ಬೆಂಗಳೂರು ನಗರದಲ್ಲಿ ನಿತ್ಯ ಒಂದು ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವ

ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ. ಲಾಕ್ ಡೌನ್ ಮಾಡದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಈ ಅವಧಿಯಲ್ಲಿ ಎಂದಿನಂತೆ ಆಸ್ಪತ್ರೆಗಳು, ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಮೊದಲಾದ ದಿನಬಳಕೆಯ ಅಗತ್ಯ ವಸ್ತುಗಳು ಲಭ್ಯವಿರುತ್ತವೆ. ಇದರ ಜೊತೆ ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ದಿನಬಳಕೆ ವಸ್ತುಗಳ ಖರೀದಿಗೆ ತೆರಳುವಾಗ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ, ಸರಕಾರ ಹೊರಡಿಸುವ ಲಾಕ್ ಡೌನ್ ಸಂಬಂಧಿತ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಬೇಕು. ತಾವು ಲಾಕ್‍ಡೌನ್ ಸಂಧರ್ಬದಲ್ಲಿ ಮನೆಯಲ್ಲೇ ಇರುವ ಮೂಲಕ ಕೋವಿಡ್-19ರ ನಿಯಂತ್ರಣಕ್ಕೆ ಕೈ ಜೋಡಿಸಿ ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.  

ಎಚ್‌ಡಿಕೆ ಬೆಂಬಲ: ಲಾಕ್‌ಡೌನ್‌ ನಿರ್ಧಾರವನ್ನು ಬೆಂಬಲಿಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ‘ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ ಜಿಲ್ಲಾ ಸಂಚಾರವನ್ನು ನಿರ್ಬಂಧಿಸಬೇಕು. ಅಧಿಕ ಪ್ರಕರಣಗಳು ದಾಖಲಾಗುತ್ತಿರುವ ಇತರ ಜಿಲ್ಲೆಗಳಲ್ಲೂ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸಿದರೆ ತಾವು ಬೆಂಬಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.