2021-22 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಯು ಆರಂಭವಾಗಿದ್ದು ಸರಕಾರದ ಆದೇಶದ ಅನುಸಾರ ಈ ಬಾರಿಯ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ತಾವೇ ತಮ್ಮ ಮೊಬೈಲನಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ರೈತರು ತಮ್ಮ ಜಮೀನಿನಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಕಲಿಸಲು “ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಆಫ್ 2021-22” (Khrif Crop Survey App 2021-22) ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಗೂಗಲ್ ಪ್ಲೇ-ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ರೈತರ ಆಧಾರ ಕಾರ್ಡ ಅನ್ನು ಮೊಬೈಲ್ ಆಪ್‌ನಲ್ಲಿ ಸ್ಕ್ಯಾನ್ ಮಾಡಿಕೊಳ್ಳುವುದು ಮತ್ತು ತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತು OTP ನಮೂದಿಸಿ ಸಕ್ರಿಯಗೊಳಿಸಿಕೊಂಡು ನಿಗದಿತ ಅವಧಿಯ ಒಳಗಾಗಿ ಬೆಳೆ ವಿವರ ದಾಖಲಿಸಬೇಕಾಗಿ ರೈತ ಬಾಂಧವರಲ್ಲಿ ಈ ಮೂಲಕ ಕೋರಲಾಗಿದೆ.
ಈ ಬೆಳೆ ಸಮೀಕ್ಷೆಯ ದತ್ತಾಂಶವನ್ನು ಸರಕಾರದ ವಿವಿಧ ಯೋಜನೆಗಳಲ್ಲಿ ಉಪಯೋಗಿಸಲಾಗುತ್ತಿದ್ದು ಅದರಲ್ಲಿ ಮುಖ್ಯವಾಗಿ ಬೆಳೆ ಹಾನಿ, ಪರಿಹಾರ, ಬೆಳೆ ವಿಮೆ, ಪಹಣಿಯಲ್ಲಿ ಬೆಳೆ ನಮೂದಿಸಲು, ಬೆಳೆ ಖರೀದಿಯ ಸಮಯದಲ್ಲಿ ಹಾಗೂ ಕೃಷಿ, ತೋಟಗಾರಿಕೆ, ರೇಷೆ, ಮೀನುಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆಗಳ ಸವಲತ್ತುಗಳನು ಪಡೆಯಲು ಅವಶ್ಯವಿರುತ್ತದೆ. ಆದ್ದರಿಂದ ಎಲ್ಲಾ ರೈತ ಬಾಂಧವರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೋಳಲು ಕೋರಲಾಗಿದೆ. ಕಳೆದ ಮುಂಗಾರು ಹಂಗಾಮಿನ ಸಾಲಿನಲ್ಲಿ ಕೂಡ ಕೇಂದ್ರ ಸರ್ಕಾರವು ರೈತರು ತಾವು ಬೆಳೆದಿರುವ ಬೆಳೆಗಳ ಮಾಹಿತಿ ನಮೂದಿಸುವ ಕಾರ್ಯವನ್ನು ಸ್ವತಃ ರೈತರಿಂದಲೇ ಮಾಡಿಸಿತ್ತು. ಹೀಗಾಗಿ ಈಗಾಗಲೇ ಒಂದು ಬಾರಿ ತಮ್ಮ ಮೊಬೈಲ್ ಫೋನ್‌ಗಳ ಮೂಲಕ ಬೆಳೆ ಸಮೀಕ್ಷೆ ನಡೆಸಿರುವ ರೈತರು ಕಳೆದ ಬಾರಿ ಅನುಸರಿಸಿದ ಮಾರ್ಗದಲ್ಲೇ ಈ ಬಾರಿಯೂ ಸಮೀಕ್ಷೆ ನಡೆಸುವಂತೆ ಮನವಿ ಮಾಡಲಾಗಿದೆ.
ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡ ಬಳಿಕ, ಮೊದಲು ರೈತರ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮದ ಹೆಸರನ್ನು ನಮೂದಿಸಬೇಕು. ಆ ನಂತರ, ಕೃಷಿ ಬೆಳೆ ಬೆಳೆದಿರುವ ಸರ್ವೇ ನಂಬರ್, ಹಿಸ್ಸಾ ಹಾಗೂ ಹೊಲದ ಮಾಲೀಕರ ಹೆಸರು ಆಯ್ಕೆ ಮಾಡಬೇಕು. ಬಳಿಕ ಅಲ್ಲಿ ನಮೂದಿಸಲಾಗಿರುವ ಸರ್ವೇ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ಕ್ಷೇತ್ರವನ್ನು ನಮೂದಿಸಿ, ಬೆಳೆಯ ಫೋಟೊ ತೆಗೆದು ಮಾಹಿತಿಯನ್ನು ಅಪ್ ಲೋಡ್ ಮಾಡಬೇಕು.
ಕೃಷಿ ವಲಯ ಹಾಗೂ ಕೃಷಿಕರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೊಳಿಸುವ ವಿವಿಧ ಯೋಜನೆಗಳ ಅನುಷ್ಠಾನಗೊಳಿಸಲು ಪ್ರಮುಖ ಆಧಾರವಾಗಿ ಬೆಳೆ ಸಮೀಕ್ಷೆ ದತ್ತಾಂಶವನ್ನು ಬಳಸಲಾಗುವುದು. ಸಾಂಖ್ಯಿಕ ಇಲಾಖೆ, ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕುವ ಕಾರ್ಯದಲ್ಲಿ, ಬೆಳೆ ವಿಮೆ ಯೋಜನೆಯ ತಾಕು ಹಂತದ ಬೆಳೆ ಪರಿಶೀಲನೆಗೆ, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಹಾಗೂ ತಾಕಿನ ಸರ್ವೇ ನಂಬರ್ ಆಯ್ಕೆ ಮಾಡಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಲೆ ನಿಗದಿ ಮಾಡಲು ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಫ್ ಅಡಿ ಸಹಾಯಧನ ನೀಡಲು, ಅಂದರೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸಲು, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ ಸಿದ್ಧಪಡಿಸಲು ಮತ್ತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಲು ನೆರವಾಗುತ್ತದೆ. ಅಲ್ಲದೆ, ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವ ಸಂದರ್ಭದಲ್ಲಿ ಬೆಳೆ ಸಮೀಕ್ಷೆಯನ್ನೇ ಆಧಾರವಾಗಿ ಇರಿಸಿಕೊಳ್ಳುವ ಕಾರಣ, ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರವನ್ನು ರೈತರ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ನಮೂದಿಸುವಂತೆ ಕೋರಲಾಗಿದೆ.
ನಿಗದಿತ ಸಮಯದೊಳಗೆ ರೈತರು ಬೆಳೆ ವಿವರ ನಮೂದಿಸಬೇಕಾಗಿದ್ದು, ತಹಶೀಲ್ದಾರರ ಅಧ್ಯಕ್ಷತೆಯ ತಾಲೂಕು ಮಟ್ಟದ ಸಮಿತಿಯು ನೇಮಿಸಿರುವ ಖಾಸಗಿ ನಿವಾಸಿಗಳ ಸಹಾಯದಿಂದ ರೈತರು ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ಛಾಯಾಚಿತ್ರ ಸಹಿತ ದಾಖಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ತಹಶೀಲ್ದಾರರ ಕಚೇರಿ ಅಥವಾ ಸಂಬಂಧಪಟ್ಟ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.