News

ಅಸಂಘಟಿತ ಕಾರ್ಮಿಕರಿಗೆ 2000 ರೂ.ಗಳ ಪರಿಹಾರ ಧನ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆಗೆ ಜುಲೈ 31 ಕೊನೆಯ ದಿನ

11 June, 2021 9:19 PM IST By:
labour

ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಪರಿಣಾಮ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಸರ್ಕಾರವು ಒಂದು ಬಾರಿ 2000 ರೂ. ಆರ್ಥಿಕ ನೆರವು ನೀಡುತ್ತಿದೆ. ಇದಕ್ಕಾಗಿ ಅರ್ಹ ಅಸಂಘಟಿತ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ 2021ರ ಜುಲೈ 31 ಕೊನೆಯ ದಿನವಾಗಿದೆ ಎಂದು ಕಲಬುರಗಿ ಪ್ರಾದೇಶಿಕ ವಿಭಾಗದ ಕಾರ್ಮಿಕ ಉಪ ಆಯುಕ್ತ ಡಿ.ಜಿ.ನಾಗೇಶ್ ಅವರು ತಿಳಿಸಿದ್ದಾರೆ.

ಮಾರ್ಗಸೂಚಿಯಂತೆ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರು ಈ 11 ವಲಯದ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಒಂದು ಬಾರಿ ಪರಿಹಾರವಾಗಿ 2000 ರೂ. ಗಳ ಆರ್ಥಿಕ ನೆರವನ್ನು ನೀಡಲಾಗುತ್ತದೆ.

2020ನೇ ಸಾಲಿನ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ನೆರವು ಪಡೆದ ಅಗಸರು ಮತ್ತು ಕ್ಷೌರಿಕ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಸದರಿ ಸಾಲಿನಲ್ಲಿ ನೆರವು ಪಡೆಯದ ಅಗಸರು ಮತ್ತು  ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ  ಕುಟುಂಬದ ಓರ್ವ ಕಾರ್ಮಿಕ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ದಿನಾಂಕ 19-05-2021ರ ಅಂತ್ಯದ ವರೆಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಅಂಬೇಡ್ಕರ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ 60 ವರ್ಷದೊಳಗಿನ ವಯೋಮಿತಿಯವರು ಅರ್ಜಿ ಸಲ್ಲಿಸಿ ನೋಂದಣಿಯಾದವರು ಮತ್ತೊಮ್ಮೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಪ್ರಸ್ತುತ ಮಾರ್ಗಸೂಚಿಯನ್ವಯ 60 ವರ್ಷ ಮೇಲ್ಪಟ್ಟು ಮತ್ತು 65 ವರ್ಷದೊಳಗಿನ ಕಾರ್ಮಿಕರು ಸಹ ಪರಿಹಾರ ಪಡೆಯಲು ಅವಕಾಶ ನೀಡಿದ್ದರಿಂದ ಈ ವಯೋಮಾನದವರು ಅರ್ಜಿ ಸಲ್ಲಿಸಬಹುದಾಗಿದೆ.

ನೆರವು ಪಡೆಯಲು ಅರ್ಹತಾ ಷರತ್ತುಗಳು: ಇ.ಎಸ್.ಐ. ಮತ್ತು ಪಿ.ಎಫ್. ಕಾಯ್ದೆಯಡಿ ನೋಂದಾಯಿತ ಫಲಾನುಭವಿಗಳಾಗದೆ ಅಸಂಘಟಿತ  ಕಾರ್ಮಿಕರಾಗಿರಬೇಕು. ವಯೋಮಿತಿ 18 ರಿಂದ 65 ವರ್ಷದೊಳಗಿದ್ದು, ಬಿ.ಪಿ.ಎಲ್. ಕುಟುಂಬದವರಾಗಿರಬೇಕು. ಕುಟುಂಬದಲ್ಲಿ ಓರ್ವರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಕಟ್ಟಡ ಕಾರ್ಮಿಕರು ಹಾಗೂ ಘೋಷಿತ 11 ವರ್ಗಗಳಲ್ಲಿ ಕೇವಲ ಒಂದು ವೃತ್ತಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಕರ್ನಾಟಕದಲ್ಲಿ ವೃತ್ತಿ ನಿರ್ವಹಿಸುವ ಹೊರ ರಾಜ್ಯದ ಕಾರ್ಮಿಕರು ಸಹ ಪರಿಹಾರಕ್ಕೆ ಅರ್ಹರಿದ್ದು, ಕರ್ನಾಟಕ ಸರ್ಕಾರ ನೀಡಿರುವ ಬಿ.ಪಿ.ಎಲ್. ಕಾರ್ಡ್ ಹೊಂದಿರಬೇಕು. ವೃತ್ತಿಗೆ ಸಂಬAಧಿಸಿದ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದಿರಬೇಕು. ಅಧಾರ ಸಂಖ್ಯೆ ಹೊಂದಿರುವ ಬ್ಯಾಂಕ್ ಖಾತೆ ಹೊಂದಿರಬೇಕು.

ಅರ್ಹ ಫಲಾನುಭವಿ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬೇಕು. ಆಧಾರ ಕಾರ್ಡ್, ವಿಳಾಸ ಧೃಡೀಕರಣ ಪತ್ರ, ಜನ್ಮ ದಿನಾಂಕ ಪ್ರಮಾಣ ಪತ್ರ, ಬಿ.ಪಿ.ಎಲ್ ಕಾರ್ಡ್, ಪಾಸ್‌ಪೋರ್ಟ್ ಅಳತೆ ಭಾವಚಿತ್ರ, ತಾನು ಅಸಂಘಟಿತ ಕಾರ್ಮಿಕರೆಂದು ಸ್ವಯಂ ಘೋಷಣೆ ಪ್ರಮಾಣ ಪತ್ರ ಹಾಗೂ ನಿಗದಿತ ಅಧಿಕಾರಿಗಳಿಂದ ಧೃಡೀಕರಿಸಲ್ಪಟ್ಟ ಉದ್ಯೋಗ ಪ್ರಮಾಣ ಪತ್ರ ದಾಖಲೆಗಳು ಹಾಗೂ ಅಲ್ಲದೇ ಅರ್ಜಿಯಲ್ಲಿ ಬ್ಯಾಂಕ್ ಖಾತೆಯ ವಿವರ ಹಾಗೂ ದೂರವಾಣಿ ಸಂಖ್ಯೆ ನಮೂದಿಸಬೇಕು.