ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ಉತ್ತಮ ಮಳೆಯಾಗಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿದೆ.
ಪ್ರಸಕ್ತ ವರ್ಷ ವಾಡಿಕೆಯಂತೆ ಮುಂಗಾರು ಪ್ರವೇಶಿಸಿತು. ಆರಂಭದಲ್ಲಿ ಮುಂಗಾರು ಮಾರುತಗಳು ದುರ್ಬಳಗೊಂಡಿತ್ತು. ಬಳಿಕ, ಚುರುಕುಗೊಂಡಿದ್ದರಿಂದ ಕೆಲ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ ಹೆಚ್ಚು ಮಳೆಯಾದರೆ ಉಳಿದ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಯಿತು. ಕಳೆದ ವರ್ಷ ಜೂನ್ ಮತ್ತು ಜುಲೈ ತಿಂಗಳ ಅವಧಿಗೆ ಹೋಲಿಸಿದರೆ ಈ ಬಾರಿ ಇದೇ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಯಷ್ಟೇ ಮಳೆಯಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 474 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 389 ಮಿಮೀ ಮಳೆಯಾಗಿ ಶೇ.18 ಕೊರತೆಯಾಗಿತ್ತು. ಈ ಬಾರಿ ಇದೇ ಅವಧಿಯಲ್ಲಿ 471 ಮಿಮೀ ಮಳೆ ಆಗಬೇಕಿತ್ತು. 445 ಮಿಮೀ ಆಗಿದೆ. ಶೇ.5 ಕಡಿಮೆಯಾದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆಯಾಗಿದೆ.
ಕಳೆದ ವರ್ಷ ಕರಾವಳಿಯಲ್ಲಿ ಶೇ.13 ಕಡಿಮೆ ಮಳೆಯಾಗಿತ್ತು. ಈ ಬಾರಿ 1623 ಮಿಮೀ ಆಗಿದ್ದು, ಶೇ.18 ಕಡಿಮೆ. ಮಲೆನಾಡಿನಲ್ಲಿ ಕಳೆದ ವರ್ಷ ಶೇ.32 ಕಡಿಮೆಯಾಗಿದ್ದ ಮಳೆ ಈ ವರ್ಷ 587 ಮಿಮೀ ಸುರಿದಿದ್ದು, ಶೇ.38 ಕೊರತೆಯಾಗಿದೆ. ಉತ್ತರ ಒಳನಾಡಿನಲ್ಲಿ ಈ ವರ್ಷ ವಾಡಿಕೆಕ್ಕಿಂತ ಶೇ.36 ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.72 ಹೆಚ್ಚು ಮಳೆಯಾಗಿದೆ.