ಕೊರೋನಾ ಆತಂಕದ ನಡುವೆಯೇ ರಾಜ್ಯ ಸರ್ಕಾರವು ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಶಾಲಾ– ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಪರ– ವಿರೋಧದ ಚರ್ಚೆ ನಡೆಯುತ್ತಿರು ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜು ಗಳನ್ನು ನವೆಂಬರ್ 17ರಿಂದ ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನೂ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ನಿಯಮವಿಲ್ಲ, ಆನ್ ಲೈನ್ ಕ್ಲಾಸ್ ಮೂಲಕವೂ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಫ್‌ಲೈನ್ ಅಥವಾ ಆನ್‌ಲೈನ್ ಇವೆರಡರಲ್ಲಿ ಯಾವುದನ್ನು ಬೇಕಾದರೂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಅಂತಿಮ ನಿರ್ಧಾರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬಿಟ್ಟಿದ್ದು. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಪ್ರಾಂಶುಪಾಲರಿಗೆ ನೀಡಬೇಕು. ನವೆಂಬರ್ 17 ರೊಳಗೆ ನೋಂದಣಿಯನ್ನು ಮಾಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕಾಲೇಜು ಆರಂಭಿಸಲಾಗುತ್ತಿದೆ. ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು, ಇಲಾಖೆಗಳ ಹಿರಿಯ ಅಧಿಕಾರಿಗಳು, ಉಪ ಕುಲಪತಿಗಳು, ಶಿಕ್ಷಣ ಕಾರ್ಯಪಡೆ ಜತೆಗೆ ಚರ್ಚೆ, ಪೋಷಕರ ಅಭಿಪ್ರಾಯ ಮತ್ತು ನೆರೆ ರಾಜ್ಯಗಳಲ್ಲಿ ಕೈಗೊಂಡ ಕ್ರಮಗಳ ಮಾಹಿತಿ ಪಡೆದು ಹಾಗೂ ಕೇಂದ್ರ ಸರ್ಕಾರದ ಅನ್‌ಲಾಕ್ ಮಾರ್ಗಸೂಚಿ ಮತ್ತು ಯುಜಿಸಿ ನಿರ್ದೇಶನದ ಮೇರೆಗೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾಲೇಜುಗಳ ಆರಂಭಕ್ಕೆ ಮೊದಲು ಕಾಲೇಜುಗಳಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು. ಯಾವುದೇ ವಿದ್ಯಾರ್ಥಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಪ್ರಾಕ್ಟಿಕಲ್ ಹಾಜರಿ ಕಡ್ಡಾಯ:
ಬೋಧನಾ ತರಗತಿಗಳಿಗೆ ಬರುವುದು ಐಚ್ಛಿಕವಾಗಿದ್ದರೂ, ಪ್ರಾಯೋಗಿಕ ತರಗತಿಗೆ ಮಾತ್ರ ವಿದ್ಯಾರ್ಥಿಗಳು ಬರಲೇಬೇಕು. ಈ ನಿಯಮ ರಾಜ್ಯದ ಎಲ್ಲಾ ಪದವಿ ಕಾಲೇಜುಗಳು, ಸ್ನಾತಕೋತ್ತರ, ಎಂಜಿನೀಯರಿಂಗ್ ಮತ್ತು ಡಿಪ್ಲೋಮಾ ಕಾಲೇಜಿಗಳಿಗೆ ಅನ್ವಯವಾಗುತ್ತದೆ.
‘ಸರ್ಕಾರವು ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಿದ್ದು, ಪೋಷಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಕೋವಿಡ್ ಮಾರ್ಗಸೂಚಿ ಅಳವಡಿಸಿಕೊಳ್ಳಲು ಕಾಲೇಜು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗುವುದು.. ಹಾಸ್ಟೆಲ್‌ಗಳಲ್ಲೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಯಾವುದೇ ವಿದ್ಯಾರ್ಥಿಯ ಆರೋಗ್ಯದಲ್ಲಿ ಏರುಪೇರಾದರೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಸದ್ಯಕ್ಕಿಲ್ಲ ಶಾಲೆ:
ಪದವಿ ಕಾಲೇಜುಗಳ ಪುನಾರಂಭದ ಬಳಿಕ ಪರಿಸ್ಥಿತಿ ಪರಿಶೀಲಿಸಿ, ಹಂತಹಂತವಾಗಿ ಪದವಿಪೂರ್ವ ಕಾಲೇಜುಗಳು ಮತ್ತು ಶಾಲೆಗಳನ್ನು ಆರಂಭಿಸುವುದಕ್ಕೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ
ಮಧ್ಯಂತರ ರಜೆ ಇಲ್ಲ:
ಈ ವರ್ಷ ತಡವಾಗಿ ತರಗತಿಗಳು ಆರಂಭವಾಗಿರುವುದರಿಂದ ಮಧ್ಯಂತರ ರಜೆ ಇರುವುದಿಲ್ಲ.ಹಾಸ್ಟೆಲ್ ಕೂಡ ತೆರೆಯಲಿದ್ದು, ಎಚ್ಚರಿಕೆ ವಹಿಸುವಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಗ ಸೂಚಿಸಲಾಗಿದೆ ಎಂದು ತಿಳಿಸಿದರು.