ಮಾವಿನ ಹಣ್ಣು ಇಷ್ಟಪಡದ ಜನರು ಯಾರು ಇಲ್ಲ ಹೇಳಿ. ಪ್ರತಿಯೊಬ್ಬರೂ ಮಾವಿನ ಹಣ್ಣನ್ನು ತಿನ್ನಲು ಬಯಸುತ್ತಾರೆ. ಅದರಲ್ಲಿ ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನ ಸೀಜನ್. ಒಬ್ಬ ರೈತ ಬೆಳೆದ ಮಾವಿನ ತೋಟದಲ್ಲಿ ಒಂದು ಮಾವಿನ ಹಣ್ಣಿನ ತೂಕ ಬರೋಬ್ಬರಿ 4.25 ಕೆಜಿ ತೂಕದ್ದಾಗಿದೆ. ಇದು ಈಗ ಗಿನ್ನಿಸ್ ದಾಖಲೆಯಾಗಿದೆ.
ಹೌದು, ಕೊಲಂಬಿಯಾದ ರೈತ ದಂಪತಿ 4.25 ಕೆಜಿ ತೂಕದ ಮಾವು ಬೆಳೆಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಬೊಯಾಕಾ ಪ್ರದೇಶದ ಸ್ಯಾನ್ ಮಾರ್ಟಿನ್ ನಲ್ಲಿ ಕೊಲಂಬಿಯಾದ ಗ್ವಾಯಾಟಾದಲ್ಲಿ ಜರ್ಮನ್ ಒರ್ಲ್ಯಾಂಡೊ ನೊವೊವಾ ಮತ್ತು ರೀನಾ ಮಾರಿಯಾ ಮಾರ್ರೊಕುನ್ ಬೆಳೆದ ಬೃಹತ್ ಮಾವಿನ ಹಣ್ಣು ಏಪ್ರಿಲ್ 29 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕದಲ್ಲಿ ದಾಖಲಾಗಿದೆ. ಈ ಬೃಹತ್ ಮಾವಿನ ಹಣ್ಣಿನ ಫೋಟೋ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
2009 ರಲ್ಲಿ ಫಿಲಿಪೈನ್ಸ್ ನಲ್ಲಿ ಪತ್ತೆಯಾದ 3.435 ಕೆಜಿ ತೂಕದ ಮಾವಿನ ಹಣ್ಣು ಹಿಂದಿನ ದಾಖಲೆಯಾಗಿತ್ತು. ಆದರೆ, ಈಗ ಈ ದಾಖಲೆಯನ್ನು ಕೊಲಂಬಿಯಾದ ದಂಪತಿ ಬೆಳೆದಿದ್ದ ಮಾವು ಮುರಿದಿದೆ. ಒರ್ಲ್ಯಾಂಡೊ ನೊವಾ ಅವರ ಪುತ್ರಿ ತಮ್ಮ ತೋಟದಲ್ಲಿ ಭಾರೀ ಗಾತ್ರದ ಮಾವನ್ನು ಕಂಡ ಬಳಿಕ ಇಂಟರ್‌ನೆಟ್‌ನಲ್ಲಿ ಈ ಹಿಂದಿನ ದಾಖಲೆಗಳ ಬಗ್ಗೆ ಹುಡುಕಾಟ ನಡೆಸಿದ್ದರು. ಇದಾದ ಬಳಿಕ ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣು ದಾಖಲೆ ಬರೆಯಲು ಯೋಗ್ಯವಾಗಿದೆ ಎಂದು ಅರಿತುಕೊಂಡ ಬಳಿಕ ಇವರು ಗಿನ್ನಿಸ್ ವಿಶ್ವ ದಾಖಲೆಯನ್ನು ಸಂಪರ್ಕಿಸಿದ್ದರು. ಈ ಮಾಹಿತಿಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ.
ಸದ್ಯ ಈ ಭಾರೀ ಗಾತ್ರದ ಮಾವಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜರ್ಮನ್ ಪ್ರಕಾರ, ಇದು 2014 ರಲ್ಲಿ ಅವರ ಪುರಸಭೆಯಿಂದ ಪಡೆದ ಎರಡನೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಯಾಗಿದೆ, ಅವರು 3,1999 ಚದರ ಮೀಟರ್ ನಲ್ಲಿ ಅತಿ ಉದ್ದದ ನೈಸರ್ಗಿಕ ಹೂವಿನ ಕಾರ್ಪೆಟ್ ಗಾಗಿ ವಿಶ್ವ ದಾಖಲೆಯಾಗಿತ್ತು.