ಕಳೆದ ತಿಂಗಳು ಈರುಳ್ಳಿ ಬೆಲೆ ಹೆಚ್ಚಾಗಿದ್ದು ಎಲ್ಲರಿಗೂ ಗೊತ್ತಿದ ವಿಷಯ. ಇತ್ತ ಈರುಳ್ಳಿ ಬೆಲೆ ಇಳಿಯುತ್ತಿದೆ. ಅತ್ತ ತೆಂಗಿನ ಕಾಯಿ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಹೌದು ಕಳೆದೆರಡು ವಾರದಿಂದ ತೆಂಗಿನಕಾಯಿ ದರ ದಾಖಲೆಯ ಏರಿಕೆಯಾಗಿರುವುದು ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಾರುಕಟ್ಟೆಯಲ್ಲಿಒಂದು ತೆಂಗಿನಕಾಯಿ ಬೆಲೆ 35 ರಿಂದ 40 ರೂಪಾಯಿಗೆ ಏರಿದೆ.
ಕಳೆದ 3-4 ತಿಂಗಳ ಹಿಂದೆ ಒಂದು ಕಾಯಿಗೆ 10 ರಿಂದ 15 ರೂ. ದರ ಇತ್ತು. ಉತ್ತಮವಾದ ತೆಂಗಿಗೆ ಮಾತ್ರವೇ ಗರಿಷ್ಠ ಬೆಲೆ ಸಿಗುತ್ತಿತ್ತು. ಸಿಪ್ಪೆ ಸುಲಿಯದೇ ಇರುವ ಒಂದು ಕಾಯಿ 20 ರಿಂದ 25 ರೂಪಾಯಿಗೆ ಮಾರಾಟವಾಗಿ ಭಾರಿ ಬೇಡಿಕೆಯಾಗಿದೆ. ಸಿಪ್ಪೆ ತೆಗೆದ ಒಂದು ತೆಂಗಿನಕಾಯಿಗೆ 35 ರಿಂದ 40 ರೂಪಾಯಿವರೆಗೆ ಏರಿಕೆ ಕಂಡಿದೆ.
ಗುಣಮಟ್ಟಕ್ಕನುಗುಣವಾಗಿ ರೈತರಿಂದ ಪ್ರತಿ ಕೆಜಿಗೆ 20 ರಿಂದ 30 ರೂಪಾಯಿಗೆ ಖರೀದಿಸಿ ವ್ಯಾಪಾರಸ್ಥರು ಅದನ್ನು ಪ್ರತಿ ಕಿಲೋಗೆ 35-40 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಅತೀ ಚಿಕ್ಕ ತೆಂಗಿನಕಾಯಿ 15 ರಿಂದ 20 ರೂ.ಗೆ ಮಾರಾಟವಾಗುತ್ತಿದೆ.
ಮಾರುಕಟ್ಟೆಯಲ್ಲಿ ತೆಂಗಿನಕಾಯಿಯನ್ನು ಕಿಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುವುದು ತೂಂಬಾ ಕಡಿಮೆ. ಕೊಳ್ಳುವಾಗಲಷ್ಟೇ ಕಿ.ಗ್ರಾಂ ಲೆಕ್ಕದಲ್ಲಿ ಕೊಳ್ಳುತ್ತಾರೆ. 800 ಗ್ರಾಂ ತೂಗುವ ತೆಂಗಿನಕಾಯನ್ನು35ಕ್ಕೆ 1 ಕಿಗ್ರಾಂ ತೂಗುವ ಕಾಯಿಗೆ 40 ರೂಪಾಯಿ ದರವಿದೆ.
ಕೇರಳ ಹೊರತುಪಡಿಸಿದರೆ ಕರ್ನಾಟಕದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ಬೆಳೆಯಲಾಗುತ್ತಿದೆ. ಈಗ ಹೊರ ರಾಜ್ಯಗಳಲ್ಲಿ ತೆಂಗು ಬೆಳೆ ಹೆಚ್ಚಿನ ಪ್ರಮಾಣದಲ್ಲಿಲ್ಲದ ಕಾರಣ ಹೊರ ರಾಜ್ಯಗಳಿಂದ ಬರುವ ಆಮದು ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ತೆಂಗಿನಕಾಯಿಗೆ ಭರಪೂರ ದರ ಬಂದಿದೆ ಎನ್ನಲಾಗುತ್ತಿದೆ.