News

ತೆಂಗು ಬೆಳೆಗಾರರಿಗೆ ಗುಡ್ ನ್ಯೂಸ್- 3.5 ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಯವರೆಗೆ ಸಾಲ ನೀಡಲು ಅರ್ಜಿ ಆಹ್ವಾನ

24 December, 2020 9:34 AM IST By:
coconut

ತೆಂಗು ಬೆಳೆಯುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ತೆಂಗು ಬೆಳೆಯಲು ಹಣಕಾಸಿನ ತೊಂದರೆ ಅನುಭವಸುತ್ತಿದ್ದವರಿಗಾಗಿ ಕೃಷಿ ಇಲಾಖೆಯುವ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಇಲಾಖೆಯು ಹೊಸ ಯೋಜನೆಯನ್ನು ಪ್ರಾರಂಭಿಸುವ ತೆಂಗು ಬೆಳೆ ಅವಲಂಬಿತ ಕಿರು ಉದ್ದಿಮೆ, ರೈತ ಉತ್ಪಾದಕರ ಸಂಸ್ಥೆ (ಎಫ್‌ಪಿಒ), ಸ್ವ–ಸಹಾಯ ಗುಂಪು ಹಾಗೂ ಉತ್ಪಾದಕರ ಸಹಕಾರಿಗಳಿಗೆ ಶೇ 3.5ರ ಬಡ್ಡಿ ದರದಲ್ಲಿ 10 ಲಕ್ಷ ಸಾಲ ನೀಡಲು ಅರ್ಜಿ ಆಹ್ವಾನಿಸಿದೆ.

ಆಹಾರ ಸಂಸ್ಕರಣೆಯ ಅಸಂಘಟಿತ ಅತಿ ಸಣ್ಣ ಉದ್ಯಮ ಕ್ಷೇತ್ರದ ಕೊಡುಗೆ ಹಾಗೂ ಅವುಗಳ ಕಾರ್ಯಕ್ಷಮತೆಗೆ ತೊಡಕಾಗುತ್ತಿರುವ ಸವಾಲುಗಳನ್ನು ಗಣನೆಗೆ ತೆಗೆದುಕೊಂಡು ಆಹಾರ ಸಂಸ್ಕರಣ ಕೈಗಾರಿಕೆಗಳ ಮಂತ್ರಾಲಯವು (ಎಂಒಎಫ್‌ಪಿಐ) ಪೂರಕ ಬೆಂಬಲ ಹಾಗೂ ಸೇವೆಗಳ ಪ್ಯಾಕೇಜ್‌ ಮೂಲಕ ಜಾರಿಗೆ ತಂದಿರುವ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯಡಿ ಈ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.

ಆಸಕ್ತ ಉದ್ದಿಮೆ, ಸಂಸ್ಥೆಗಳು ಯೋಜನೆಯ ವಿಸ್ತೃತ ವರದಿ ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾಮಟ್ಟದ ಸಮಿತಿಗೆ ಸಲ್ಲಿಸಬೇಕು ಮತ್ತು ಕೇಂದ್ರ ಸರಕಾರದ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಬೇಕು.

ತೆಂಗು ಬೆಳೆ ಅವಲಂಬಿತ ಸಂಸ್ಕರಣಾ ಉದ್ದಿಮೆಯನ್ನು ಕೈಗೊಳ್ಳಲಿಚ್ಛಿಸುವವರು ಮಾಹಿತಿಗೆ ಕೇಂದ್ರ ಸರಕಾರದ ಆಹಾರ ಸಂಸ್ಕರಣ ಕೈಗಾರಿಕೆಗಳ ಮಂತ್ರಾಲಯದ ಜಾಲತಾಣ mofpi.nic.in ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ನೋಡಲ್‌ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ತುಮಕುರು ಜಿಲ್ಲೆಯ ಕೃಷಿ ನಿರ್ದೇಶಕಿ ರಾಜಸುಲೋಚನ ತಿಳಿಸಿದ್ದಾರೆ.