News

ಹಾಲಿನ ಪ್ರೋತ್ಸಾಹಧನ ಕಡಿತ ಮಾಡದಂತೆ ಕೆಎಂಎಫ್‌ಗೆ ಸಿಎಂ ಸಿದ್ದರಾಮಯ್ಯ ಸೂಚನೆ!

05 June, 2023 12:48 PM IST By: Kalmesh T
CM Siddaramaiah instructs KMF not to reduce milk subsidy!

ಕರ್ನಾಟಕ ಹಾಲು ಮಂಡಳಿ (Karnataka Milk Federation) ರೈತರಿಗೆ ನೀಡುತ್ತಿದ್ದ ಹಾಲಿನ ಪ್ರೋತ್ಸಾಹಧನವನ್ನು ಕಡಿತ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ರೈತರಿಂದ ಖರೀದಿ ಮಾಡುವ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಯಾವುದೇ ಕಾರಣಕ್ಕೂ ಕಡಿತ ಮಾಡದಂತೆ ಸೂಚನೆ ನೀಡಿದ್ದಾರೆ.

ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಈ ಕುರಿತು ಸಭೆಯಲ್ಲಿ ಚರ್ಚಿಸಿದ್ದು, ನಿಗದಿಪಡಿಸಿದ್ದ ದರವನ್ನ ಕಡಿತ ಮಾಡದಂತೆ ಸೂಚಿಸಿದ್ದಾರೆ.

ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟವಾದ ಬಮೂಲ್‌ ಏಪ್ರಿಲ್‌ 1ರಿಂದ ಮೇ 31ರ ವರೆಗೆ ಪ್ರತಿ ಲೀಟರ್‌ ಹಾಲಿಗೆ 2.85 (ಎರಡು ರೂಪಾಯಿ ಎಂಬತ್ತೈದು ಪೈಸೆ) ರೂಪಾಯಿ ವಿಶೇಷ ಧನವನ್ನು ಘೋಷಿಸಿತ್ತು.

ಈಚೆಗೆ ಉತ್ತಮ ಮಳೆಯಾಗಿದ್ದು, ಮೇವಿನ ಕೊರತೆ ತಗ್ಗಿರುವುದು ಹಾಗೂ ಹಾಲಿನ ಉತ್ಪಾದನೆಯೂ ಹೆಚ್ಚಳವಾದ ಹಿನ್ನೆಲೆಯಲ್ಲಿ ಒಕ್ಕೂಟ ನೀಡುತ್ತಿದ್ದ ಪ್ರೋತ್ಸಾಹಧನದಲ್ಲಿ 1.50 ರೂಪಾಯಿ ಕಡಿತ ಮಾಡಲಾಗಿದೆ.

ಆದರೆ, ಇದಕ್ಕೆ ರೈತರು ಹಾಗೂ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಈ ಸಂಬಂಧ ಒಕ್ಕೂಟಕ್ಕೆ ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರಿಂದ ಖರೀದಿ ಮಾಡಲಾಗುತ್ತಿರುವ ಹಾಲಿಗೆ ಈಗಾಗಲೇ ನಿಗದಿಪಡಿಸಿರುವ ದರದಲ್ಲಿ ಯಾವುದೇ ಬದಲಾವಣೆ ಮಾಡಬಾರದು.

ಅಲ್ಲದೇ ಒಮ್ಮೆಗೇ ದರ ಕಡಿತ ಮಾಡುವಂತಿಲ್ಲ. ಈ ಕುರಿತು ಸರ್ಕಾರದೊಂದಿಗೆ ಚರ್ಚೆ ಮಾಡಿಯೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.