News

ಸುಳ್ಳು ಸುದ್ದಿಗಳಿಗೆ ಬ್ರೇಕ್ : ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಸೂಚನೆ

29 August, 2023 1:01 PM IST By: Kalmesh T
CM instructs to take decisive action against those spreading fake news

ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರು ಹಾಗೂ ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುಳ್ಳು ಸುದ್ದಿ ಹರಡುವವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಜೈಲಿಗೆ ತಳ್ಳಿ. ಡ್ರಗ್ಸ್ ವಿಚಾರದಲ್ಲಿ ಮೈಸೂರು ವಲಯದಲ್ಲಿ ಝೀರೋ ಟಾಲರೆನ್ಸ್ ಇರಬೇಕು. ಮೈಸೂರು ಸಾಂಸ್ಕೃತಿಕ ನಗರಿ. ಇಲ್ಲಿ ಡ್ರಗ್ಸ್ ಮೇನಿಯಾ, ಮಾಫಿಯಾಗೆ ಅವಕಾಶ ಇರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವ ಸೂಚನೆ ನೀಡಿದರು.

ಆದಿವಾಸಿಗಳಿಗೆ 4 ತಿಂಗಳಿಂದ ಆಹಾರ ನೀಡುತ್ತಿಲ್ಲ ಎನ್ನುವ ವರದಿಗೆ ಸಂಬಂಧಪಟ್ಟಂತೆ ಗರಂ ಆದ ಮುಖ್ಯಮಂತ್ರಿಗಳು, ನಿಮಗೆ ಆರು ತಿಂಗಳು ಸಂಬಳ ನಿಲ್ಲಿಸಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆ ಇದೆಯೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತೋಟಗಾರಿಕಾ ಇಲಾಖೆ :

ತೆಂಗು, ರೇಷ್ಮೆ ಮತ್ತಿತರ ಬೆಳೆಗಳು ನಾಶ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಂಬಂಧಪಟ್ಟ ವಿಜ್ಞಾನಿಗಳ ಜೊತೆ ಚರ್ಚಿಸಿ ಪರಿಹಾರ ಕಂಡುಕೊಂಡು, ಕಾಯಿಲೆ ವ್ಯಾಪಕವಾಗಿ ಆವರಿಸುವ ಮೊದಲೇ ರಕ್ಷಣಾತ್ಮಕ ಕ್ರಮ ಕೈಗೊಳ್ಳಬೇಕು ಎಂದರು.

ಆರೋಗ್ಯ ಇಲಾಖೆ :

ಜಿಲ್ಲಾ ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಎಂಆರ್‌ಐ, ಎಕ್ಸ್ರರೇ ಸೇರಿ ಎಲ್ಲಾ ತಪಾಸಣಾ ವ್ಯವಸ್ಥೆ ಇರಬೇಕು. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಹಣ ಖರ್ಚೇ ಆಗುತ್ತಿಲ್ಲ. ಹಾಗೇ ಉಳಿದಿದೆ.

ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ಅಗತ್ಯ ಸಲಕರಣೆಗಳೇ ಇಲ್ಲ ಏಕೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿಗಳು ತಾಲ್ಲೂಕಾ ಆಸ್ಪತ್ರೆಗಳಿಗೆ ಖುದ್ದಾಗಿ ಭೇಟಿ ನೀಡಬೇಕು. ಭೇಟಿ ನೀಡಿದ ಬಗ್ಗೆ ಡೈರಿ ಬರೆಯಬೇಕು ಎಂದು ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ ವೈದ್ಯರಿಗಾಗಿಯೇ ಕಟ್ಟಿಸಿರುವ ಕ್ವಾಟರ್ಸ್‌ಗಳಿವೆ. ಅಲ್ಲಿ ಏಕೆ ವೈದ್ಯರು ಉಳಿದುಕೊಳ್ಳುತ್ತಿಲ್ಲ. ನೀವು ಏನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಸರ್ಜನ್, ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಮೆಡಿಕಲ್ ಕಾಲೇಜಿನ ಡೀನ್‌ಗಳಿಗೆ ಪ್ರತ್ಯೇಕ ಜವಾಬ್ದಾರಿಗಳಿರುತ್ತವೆ. ನೀವುಗಳು ನಿಮ್ಮ ಜವಾಬ್ದಾರಿಯನ್ನು ಪರಸ್ಪರ ಹೊಂದಾಣಿಕೆಯಿಂದ ನಿರ್ವಹಿಸದೇ ಹೋದರೆ ಆರೋಗ್ಯ ವ್ಯವಸ್ಥೆ ಏರುಪೇರಾಗುತ್ತದೆ.

ಹಾಗೇನಾದರೂ ಆದರೆ ನೀವುಗಳೇ ನೇರ ಹೊಣೆ. ಕ್ರಮ ಎದುರಿಸಲು ಸಿದ್ದರಿರಬೇಕು ಎಂದು ಎಚ್ಚರಿಕೆ ನೀಡಿದರು.

ಕೆ.ಆರ್.ಆಸ್ಪತ್ರೆಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಉನ್ನತೀಕರಿಸುವುದು ಸೇರಿದಂತೆ ಇನ್ನಿತರೆ ಅಗತ್ಯತತೆಗಳನ್ನು ಪೂರೈಸುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಸೂಚಿಸಲಾಯಿತು.

KPSC Recruitment 2023 : 230 ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗೆ ಅರ್ಜಿ ಆಹ್ವಾನ!