News

ಕೃಷಿ, ಕೃಷಿಯೇತರ ಚಟುವಟಿಕೆಗೆ 39 ಸಾವಿರ ಕೋಟಿ ರೂ. ಸಾಲ ವಿತರಣೆಗೆ ಸಿಎಂ ಚಾಲನೆ

17 September, 2020 10:41 AM IST By:

ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ 39,300 ಕೋಟಿ ಸಾಲ ಸೌಲಭ್ಯ ನೀಡುವ ‘ಆರ್ಥಿಕ ಸ್ಪಂದನ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, "ಕೇಂದ್ರ ಸರಕಾರದ ಆತ್ಮನಿರ್ಭರ್‌ ಯೋಜನೆ ಭಾಗವಾಗಿ ಈ ವರ್ಷ 39,300 ಕೋಟಿ ರೂ. ಸಾಲ ನೀಡಲು ತೀರ್ಮಾನಿಸಲಾಗಿದೆ. ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಇದೇ ಬಗೆಯ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

 ಕೃಷಿ ಹಾಗೂ ಕೃಷಿಯೇತರ ವಲಯಕ್ಕೆ  ಈ  ಸಾಲವನ್ನು ಸಹಕಾರ ಸಂಸ್ಥೆಗಳ ಮೂಲಕ ಒದಗಿಸಲು ತೀರ್ಮಾನಿಸಲಾಗಿದೆ. ಕೃಷಿ ಉತ್ಪಾದಕ ಸಂಸ್ಥೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 4,525 ಕೋಟಿ ರೂ. ಮೊತ್ತವನ್ನು ರಾಜ್ಯ ಸರಕಾರ ಹಂಚಿಕೆ ಮಾಡಿದೆ ಎಂದಿದೆ.

ಈ ಯೋಜನೆಯಡಿ 3 ಲಕ್ಷದ ವರೆಗೆ ಶೂನ್ಯ ಬಡ್ಡಿ ದರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಶೇ 3 ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ರಾಜ್ಯ ಸಹಕಾರ ಇಲಾಖೆಯ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ‘ಆತ್ಮನಿರ್ಭರ್’‌ ಯೋಜನೆಯ ನೆರವಿನೊಂದಿಗೆ ‘ಆರ್ಥಿಕ ಸ್ಪಂದನ’ ಜಾರಿ ಮಾಡಲಾಗುತ್ತಿದೆ. ಕೋವಿಡ್–19 ಇರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಈ ಸಾಲ ಯೋಜನೆಯಿಂದ ಅನುಕೂಲವಾಗಲಿದೆ’ ಎಂದು ಹೇಳಿದರು.

ಹೈನು, ಮೀನಿಗಾರರಿಗೂ ಸಾಲ:

ಹೈನುಗಾರರಿಗೆ ಹಾಗೂ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ 2 ಲಕ್ಷ ರೂ. ಸಾಲ ಕೊಡುವ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. ಈ ಎಲ್ಲ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಸುತ್ತಿದ್ದೇವೆ  ಎಂದು ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಹೇಳಿದರು.

. ಕೋವಿಡ್‌ ಸಂದರ್ಭದಲ್ಲಿ ಬಡವರಿಗೆ ಹಾಲು ವಿತರಣೆ ಮಾಡಲು 79 ಕೋಟಿಯನ್ನು ಕೆಎಂಎಫ್‌ಗೆ ಬಿಡುಗಡೆ ಮಾಡಲಾಗಿದೆ. ರೈತರಿಗೂ ಸಹ ಸಾಲ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. 15,300 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ಇದ್ದು, ಈವರೆಗೆ 12.11 ಲಕ್ಷ ರೈತರಿಗೆ 7,929.30 ಕೋಟಿ ರೂಪಾಯಿ ಸಾಲವನ್ನು ಶೂನ್ಯ ಹಾಗೂ ಶೇ. 3ರ ಬಡ್ಡಿ ದರದಲ್ಲಿ ವಿತರಣೆ ಮಾಡಲಾಗಿದೆ. ಎಂದರು.