News

ಸಿಎಂ ಬಿಎಸ್ ವೈಗೆ ಎರಡನೇ ಬಾರಿ ಕೊರೋನಾ ಸೋಂಕು ಧೃಢ

16 April, 2021 8:10 PM IST By:
CM B.S. Yadiyurappa

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂಲಕ ಅವರಿಗೆ ಎರಡನೇ ಬಾರಿಗೆ ಸೋಂಕು ಕಾಣಿಸಿಕೊಂಡಿದೆ.

ಗುರುವಾರ ಬೆಳಗಾವಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಬಿಎಸ್ ಯಡಿಯೂರಪ್ಪ ಅವರು ಜ್ವರದಿಂದ ಬಳಲುತ್ತಿದ್ದರು.  ಈ ಹಿನ್ನೆಲೆಯಲ್ಲಿ ರಾಮಯ್ಯ ಆಸ್ಪತ್ರೆಯಲ್ಲಿ ಜನರಲ್ ಚೆಕಪ್ ಗೆ ಹೋಗಿದ್ದರು. ಅಲ್ಲಿ ಕೋವಿಡ್ ಟೆಸ್ಟ್  ಮಾಡಿಸಿದಾಗ ಕೊರೋನಾ ದೃಢಪಟ್ಟಿದೆ. ತಕ್ಷಣ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪರೀಕ್ಷೆಗೆ ಸಲಹೆ:

ಕೊರೊನಾ ಸೋಂಕು ಧೃಢ ಪಟ್ಟಿರುವ ವಿಷಯವನ್ನು ಟ್ವೀಟ್ ನಲ್ಲಿ ಖಚಿತಪಡಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಈ ಹಿಂದೆಯೂ ಕೂಡ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಕಾಣಿಸಿಕೊಂಡಾಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಬೆಳಗ್ಗೆ ಸಭೆಯಲ್ಲಿದ್ದವರಿಗೆ ಆತಂಕ:

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಇಂದು ಬೆಳಗ್ಗೆ ಕೊರೋನಾ ಸೋಂಕು ಸಂಬಂಧ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸೇರಿದಂತೆ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಮಹಾ ನಿರ್ದೇಶಕ ಪ್ರವೀಣ್ ಸೂದ್, ಆಯುಕ್ತ ಗೌರವ್ ಗುಪ್ತಾ ಸೇರಿದಂತೆ ಹಿರಿಯ ಅಧಿಕಾರಿಗಳಲ್ಲಿ ಕೂಡ ಆತಂಕ ಹೆಚ್ಚುವಂತೆ ಮಾಡಿದೆ

ಶುಕ್ರವಾರ 14 ಸಾವಿರ ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು

ರಾಜ್ಯದಲ್ಲಿ ಇಂದೂ ಕೊರೋನಾ ಬಾರಿ ಏರಿಕೆಯಾಗಿದ್ದು ಸತತ ಎರಡನೇ ದಿನವೂ ರಾಜ್ಯದಲ್ಲಿ ಒಂದೇ ದಿನ 14ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ರಾಜಧಾನಿ ಬೆಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು ಹೊಸ ಸೋಂಕು ಪ್ರಕರಣಗಳ ಸಂಖ್ಯೆ 10 ಸಾವಿರದ ಹತ್ತಿರದಲ್ಲಿದೆ. ಕಳೆದ 24 ಗಂಟೆಗಳಲ್ಲಿ 78 ಮಂದಿ ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರ ಒಂದರಲ್ಲೇ 57 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ , ಮೈಸೂರಿನಲ್ಲಿ ಐವರು ಕಲಬುರಗಿಯಲ್ಲಿ ಮೂವರು ಬೀದರ್ ತುಮಕೂರಿನಲ್ಲಿ ತಲಾ ಇಬ್ಬರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮಂಡ್ಯ ,ರಾಮನಗರ ,ಶಿವಮೊಗ್ಗ ಉಡುಪಿ ,ಉತ್ತರ ಕನ್ನಡ, ಯಾದಗಿರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ.