1. ಹಿರಿಯ ನಾಗರಿಕರಿಗೆ ಸಂಪೂರ್ಣ ಕಣ್ಣು ತಪಾಸಣೆ ನಡೆಸಿ ಕನ್ನಡಕ ವಿತರಿಸುವ ವಿನೂತನ ಯೋಜನೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ತಾಲೂಕು ಆಸ್ಪತ್ರೆ ಉನ್ನತೀಕರಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. 60 ವರ್ಷ ಮೇಲ್ಪಟ್ಟವರ ಕಣ್ಣು ತಪಾಸಣೆ ನಡೆಸಿ ಕನ್ನಡಕ ವಿತರಿಸುವ ವಿನೂತನ ಯೋಜನೆ ಆರಂಭಿಸಲಾಗುವುದು.
ರಾಜ್ಯದಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. 60ಕ್ಕೂ ಹೆಚ್ಚಿನ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ,
12 ಹೊಸ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಹಾಗೂ ಡಿಸೆಂಬರ್‌ನಲ್ಲಿ 437 ಕ್ಲಿನಿಕ್ ಆರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರೈತರೊಬ್ಬರ ಹೊಲದಲ್ಲಿ ಪುರಾತನ ಕಾಲದ ಚಿನ್ನದ ನಾಣ್ಯಗಳು ಪತ್ತೆ!
2. ಕರ್ನಾಟಕ ರಾಜ್ಯವನ್ನು ಹವಾಮಾನ ವೈಪರೀತ್ಯ ನಿರೋಧಕವಾಗಿ ರೂಪಿಸುವ ಕುರಿತಂತೆ ವಿಶ್ವಬ್ಯಾಂಕಿನ ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಒಂದೂವರೆ ದಶಕದಲ್ಲಿ ಮೊದಲ ಏಳೆಂಟು ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ನಾಲ್ಕೈದು ವರ್ಷಗಳಿಂದ ತೀವ್ರ ಪ್ರವಾಹ, ಭೂಕುಸಿತ, ಸಮುದ್ರ ಕೊರೆತದಂತಹ ಪರಿಸ್ಥಿತಿ ತಲೆದೋರಿದೆ.
ಒಂದೇ ವರ್ಷ ಪ್ರವಾಹ ಹಾಗೂ ಬರ ಪರಿಸ್ಥಿತಿಯನ್ನು ಎದುರಿಸಿದ ದಾಖಲೆಗಳೂ ರಾಜ್ಯದಲ್ಲಿವೆ. ಇದರಿಂದ ರಾಜ್ಯದಲ್ಲಿ ಬೆಳೆ, ಸಾರ್ವಜನಿಕ ಆಸ್ತಿಪಾಸ್ತಿಗೆ ತೀವ್ರ ನಷ್ಟವಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದಕ್ಕೆ ಶಾಶ್ವತ ಪರಿಹಾರ ಹಾಗೂ ವಿಪತ್ತು ನಿರ್ವಹಣೆಗೆ ಸೂಕ್ತ ಪೂರ್ವ ತಯಾರಿಯನ್ನು ಮಾಡಿಕೊಳ್ಳುವ ವ್ಯವಸ್ಥೆ ರೂಪಿಸಲು ಉದ್ದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದಿಂದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಕೈಗಾರಿಕೆಗಳಿಗೆ 1 ಲಕ್ಷ ಕೋಟಿ ಮೂಲಸೌಕರ್ಯ ನಿಧಿ!
3. Two
"ಸುಸ್ಥಿರ ಕೃಷಿಗಾಗಿ ಮಣ್ಣಿನ ಆರೋಗ್ಯ ನಿರ್ವಹಣೆ" ರಾಷ್ಟ್ರೀಯ ಸಮ್ಮೇಳನವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಉದ್ಘಾಟಿಸಿದರು.
"ರಾಸಾಯನಿಕ ಕೃಷಿ ಮತ್ತಿತರ ಕಾರಣಗಳಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ, ಈ ಪರಿಸ್ಥಿತಿಗಳು ದೇಶವನ್ನು ಮಾತ್ರವಲ್ಲದೆ ಜಗತ್ತನ್ನೂ ಚಿಂತೆಗೀಡು ಮಾಡಲಿವೆ.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಪ್ರಧಾನ ಮಂತ್ರಿ ಬದ್ಧರಾಗಿದ್ದಾರೆ.
ಕಳೆದ ವರ್ಷ 17 ರಾಜ್ಯಗಳಲ್ಲಿ 4.78 ಲಕ್ಷ ಹೆಕ್ಟೇರ್ ಹೆಚ್ಚುವರಿ ಪ್ರದೇಶವನ್ನು ನೈಸರ್ಗಿಕ ಕೃಷಿಗೆ ಒಳಪಡಿಸಲಾಗಿದೆ. ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 1584 ಕೋಟಿ ವೆಚ್ಚದಲ್ಲಿ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ಯೋಜನೆ ಅನುಮೋದಿಸಿದೆ.
ಎರಡು ಹಂತಗಳಲ್ಲಿ ದೇಶದಾದ್ಯಂತ 22 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಗಿದೆ. ಸರ್ಕಾರವು ಮಣ್ಣಿನ ಆರೋಗ್ಯ ನಿರ್ವಹಣಾ ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಯನ್ನು ಸಹ ಮಾಡುತ್ತಿದೆ. ಇದರಲ್ಲಿ ವಿವಿಧ ರೀತಿಯ ಮಣ್ಣು ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಾದ್ಯಂತ ನಾಳೆಯಿಂದ ಭಾರೀ ಮಳೆಯಬ್ಬರ; ಹವಾಮಾನ ಇಲಾಖೆ ಮುನ್ಸೂಚನೆ
4 . ಕರ್ನಾಟಕ ರಾಜ್ಯವು ದೇಶದಲ್ಲಿಯೇ ಮೊದಲ ಬಾರಿಗೆ ಪರಿಸರ ಆಯವ್ಯಯ ಮಂಡಿಸಿದ ರಾಜ್ಯವಾಗಿದೆ. ಸಮುದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗೆ ವಿಶ್ವಬ್ಯಾಂಕಿನೊಂದಿಗೆ ಕೈಜೋಡಿಸುವ ಬಗ್ಗೆ ಈಗಾಗಲೇ ಆಯವ್ಯಯದಲ್ಲಿ ಘೋಷಿಸಲಾಗಿದೆ. ಪರಿಸರ ನಾಶವನ್ನು ಅಂದಾಜು ಮಾಡಿ, ಅದನ್ನು ಭರ್ತಿ ಮಾಡುವ ಉದ್ದೇಶಕ್ಕೆ 100 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಪರಿಸರ ಸ್ನೇಹಿ ಕ್ರಮಗಳಿಗೆ ವಿಶ್ವಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಪತ್ತು ನಿರೋಧಕ ರಾಜ್ಯ ನಿರ್ಮಾಣ ಯೋಜನೆಯಲ್ಲಿ ವಿಶ್ವಬ್ಯಾಂಕ್ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ. ವಿಪತ್ತು ನಿರ್ವಹಣೆಯ ಕುರಿತಾದ ಸಮಗ್ರ ಯೋಜನೆ ಇದಾಗಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
5. ರಾಜ್ಯದಲ್ಲಿ ರೈತರು ಕೃಷಿ ಕೆಲಸ ಮತ್ತು ಆರ್ಥಿಕ ವ್ಯವಹಾರವನ್ನು ಡಿಜಿಟಲೀಕರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಕೃಷಿ ಇಲಾಖೆ ಸಕ್ರಿಯವಾಗಿದ್ದು, ಈ ನಿಟ್ಟಿನಲ್ಲಿ ಭರದಿಂದ ಸಾಗಿದೆ.
ರಾಜ್ಯದ ರೈತರು ಸಂಪೂರ್ಣ ಡಿಜಿಟಲೀ ಕರಣಗೊಳ್ಳುತ್ತಿದ್ದು, 2023ರ ವೇಳೆಗೆ ಆನ್ ಲೈನ್‌ನಲ್ಲಿಯೇ ಬೆಳೆಗಳ ವಿತರಣೆ ಹಾಗೂ ಖರೀದಿ ಮಾಡಲಿದ್ದಾರೆ.
ರೈತರು ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆಗೆ ಒಳಗಾಗುತ್ತಿರುವುದು ದೇಶದಲ್ಲಿಯೇ ಇದೇ ಮೊದಲಾಗಿದೆ.
ರೈತರನ್ನು ಡಿಜಿಟಲೀಕರಣ ಪ್ರಕ್ರಿಯೆಗೆ ಒಳಪಡಿಸುವ ನಿಟ್ಟಿನಲ್ಲಿ ರಾಜ್ಯದ ಕೃಷಿ ಇಲಾಖೆ ದಿಟ್ಟ ಹೆಜ್ಜೆ ಇರಿಸಿದೆ. 2023ರ ಏಪ್ರಿಲ್ 1 ರಿಂದ ರೈತರು ಸಂಪೂರ್ಣ ಕಾಗದರಹಿತ ಹಾಗೂ ಪಾರದರ್ಶಕ ರೀತಿಯಲ್ಲಿ ಖರೀದಿ ಮತ್ತು ವಿತಾರಣಾ ಪ್ರಕ್ರಿಯೆ ಮಾಡುವುದು ಕಡ್ಡಾಯ ಎಂದು ಘೋಷಿಸಲಾಗಿದೆ. ನವೆಂಬರ್ 24, 2022 ರಂದು ಸರ್ಕಾರ ರೈತರ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿತ್ತು.
6. ರಾಜ್ಯದ ರೈತರ ಮಕ್ಕಳಿಗಾಗಿ ರಾಜ್ಯ ಸರ್ಕಾರ ರೂಪಿಸಿದ್ದ ಯೋಜನೆ ರೈತ ವಿಧ್ಯಾನಿಧಿ ಯೋಜನೆ. ಇದೀಗ ಈ ಯೋಜನೆಯಡಿ ರೈತರ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಬಯಸಿದರೆ ಕಡ್ಡಾಯವಾಗಿ FRUITS ID ಹೊಂದಿರಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ರೈತರು ಈ ಯೋಜನೆಯಡಿ ತಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ ಪಡೆಯಲು ಕೂಡಲೇ ನೋಂದಣಿ ಮಾಡಿಸಲು ಕೋರಲಾಗಿದೆ.
7. ಧಾರವಾಡ ತಾಲೂಕಿನ ಉಪ್ಪಿನ ಬೇಟಗೇರಿ ಗ್ರಾಮದಲ್ಲಿ ಅಂದಾಜು 3 ಕೋಟಿ 50 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ವಿರಕ್ತಮಠ ಹತ್ತಿರ ಲದ್ದಿಗಟ್ಟಿ ಹಳ್ಳಕ್ಕೆ ಇಂಗು ಕೆರೆ ನಿರ್ಮಾಣ ಹಾಗೂ ಶಹಾಪೂರಮಠ ರಸ್ತೆ ಚಿಕ್ಕ ಹಳ್ಳಕ್ಕೆ ಬಿಸಿಬಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಶಾಸಕ ಅಮೃತ ದೇಸಾಯಿ, ವಿರಕ್ತಮಠದ ವಿರೂಪಾಕ್ಷ ಸ್ವಾಮಿಜಿ ಮುಂತಾದವರು ಉಪಸ್ಥಿತರಿದ್ದರು
8. ರಾಜ್ಯದ ವಿವಿಧೆಡೆ ಸೋಮವಾರ ಸಾಧಾರಣ ಮಳೆಯಾಗಿದ್ದು ,ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆಯಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದಿದೆ. ಬಂಗಾಳಕೊಲ್ಲಿಯಲ್ಲಿ ಡಿಸೆಂಬರ್ 7ಕ್ಕೆ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಕೆಲವು ಆಯ್ದ ಭಾಗದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯಾವುದೇ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಮಳೆ ಆಗಿರುವುದು ಕಂಡುಬಂದಿಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಬೀದರ್‌ನಲ್ಲಿ ದಾಖಲಾಗಿದೆ.
ಮುಂದಿನ 24 ಗಂಟೆಗಳ ಕಾಲ ರಾಜ್ಯದ ಒಂದೆರಡು ಕಡೆ ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನರ್ಹ ಬದಲಾವಣೆಗಳು ಕಂಡುಬಂದಿಲ್ಲ.
ಇನ್ನು ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇರಲಿದೆ.
9 . ಕೃಷಿ ಸಂಬಂಧಿ ವಿವಿಧ ಇಲಾಖೆಗಳು ಜಾರಿಗೊಳಿಸಿರುವ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಲು "ಕೃಷಿ ಹೂಡಿಕೆ ಪೋರ್ಟಲ್" ನ್ನು ಬಿಡುಗಡೆ ಮಾಡಲಾಯಿತು.
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷರಾದ ಮೆಲಿಂಡಾ ಫ್ರೆಂಚ್ ಗೇಟ್ಸ್ ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿದರು.
ಸಭೆಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಮಗ್ರ "ಕೃಷಿ ಹೂಡಿಕೆ ಪೋರ್ಟಲ್" ಅನ್ನು ತೋಮರ್ ಉದ್ಘಾಟಿಸಿದರು.
ಸರ್ಕಾರವು ಮಹಿಳಾ ರೈತರ ಮೇಲೆ ಸಂಪೂರ್ಣ ಗಮನ ಹರಿಸಿದೆ. ಕೃಷಿ ಕ್ಷೇತ್ರದಲ್ಲಿನ ಹಲವಾರು ಸವಾಲುಗಳನ್ನು ಎದುರಿಸಲು ಪ್ರಧಾನಿ ಮೋದಿಯವರ ನಿರ್ದೇಶನದ ಅಡಿಯಲ್ಲಿ
ಭಾರತ ಸರ್ಕಾರವು ನಿರಂತರವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಭೆಯಲ್ಲಿ ತೋಮರ್ ಹೇಳಿದರು.
10. ದೇಶದಲ್ಲಿಯೇ ಪ್ರಥಮವಾಗಿ ರಾಜ್ಯ ಕೃಷಿ ಇಲಾಖೆ ಸಂಪೂರ್ಣ ಕಾಗದ ರಹಿತಗೊಳ್ಳಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
2023ರ ಏಪ್ರಿಲ್ 1 ರಿಂದ ಕಡ್ಡಾಯವಾಗಿ ಸಂಪೂರ್ಣ ಕಾಗದ ರಹಿತಗೊಳ್ಳಲಿದೆ.
ಇಲಾಖೆಯ ಎಲ್ಲ ಕಚೇರಿಗಳಲ್ಲಿಯೂ ಪಾರದರ್ಶಕ ರೀತಿಯಲ್ಲಿ ಸಂಗ್ರಹಣೆ ಮತ್ತು ವಿತರಣೆ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
11. ಪಿಎಂ ಕಿಸಾನ್ ಯೋಜನೆಯಡಿ ಅರ್ಜಿ ಸಲ್ಕಲಿಸಿದ 20 ಲಕ್ಷಕ್ಕೂ ಹೆಚ್ಚು ರೈತರಿಗೆ ಈ ಬಾರಿ ಪಿಎಂ ಕಿಸಾನ್ 13 ನೇ ಕಂತಿನ ಹಣ ಬರುವುದಿಲ್ಲ ಎನ್ನಲಾಗುತ್ತಿದೆ.
ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ವರ್ಷ ರೈತರಿಗೆ ಸುಮಾರು 6 ಸಾವಿರ ಆರ್ಥಿಕ ನೆರವು ನೀಡಲಾಗುತ್ತದೆ.
ಕಂತುಗಳ ಸಂಖ್ಯೆ ಹೆಚ್ಚಾದಂತೆ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. 12 ನೇ ಕಂತಿನಲ್ಲಿ ಫಲಾನುಭವಿಗಳ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ಜನರ ಹೆಸರನ್ನು ತೆಗೆದುಹಾಕಲಾಗಿತ್ತು.
ತನಿಖೆಯ ಸಮಯದಲ್ಲಿ ಉತ್ತರ ಪ್ರದೇಶವೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ರೈತರು ಈ ಯೋಜನೆಗೆ ಅನರ್ಹರು ಎಂದು ಘೋಷಿಸಲಾಯಿತು. ಈಗ ಈ ಎಲ್ಲ ರೈತರಿಗೆ 13ನೇ ಕಂತಿನ ಹಣ ದೊರೆಯುವುದಿಲ್ಲ.
ಪಿಎಂ ಕಿಸಾನ್ ಯೋಜನೆಯ ಸವಲತ್ತುಗಳನ್ನು ಅನರ್ಹರು ಪಡೆಯುವ ಹಲವು ಪ್ರಕರಣ ಬೆಳಕಿಗೆ ಬಂದಿವೆ. ಇದುವರೆಗೂ ಅನರ್ಹ ರೈತರಿಂದ ಎಲ್ಲಾ ಕಂತಿನ ಮೊತ್ತವನ್ನು ಹಿಂಪಡೆಯಲಾಗುತ್ತಿದೆ ಎಂದು ತಿಳಿದು ಬಂದಿದೆ.
12. FAI ವಾರ್ಷಿಕ ಸೆಮಿನಾರ್ 2022 ಅನ್ನು '2030 ರ ಹೊತ್ತಿಗೆ ರಸಗೊಬ್ಬರ ವಲಯ' ಎಂಬ ವಿಷಯಕ್ಕೆ ಸಮರ್ಪಿಸಲಾಗಿದೆ.
ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು
ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.
ನಮಸ್ಕಾರ…