News

ರಾಜ್ಯದಲ್ಲಿ ತಗ್ಗಿದ ಮಳೆ ಅಬ್ಬರ-ನಿಟ್ಟುಸಿರು ಬಿಟ್ಟ ರೈತರು

21 June, 2020 12:38 PM IST By:

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಆರ್ಭಟ ಕೊನೆಗೂ ಶಾಂತವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರು ಹರಿವು ಪ್ರಮಾಣ ಏರಿಕೆಯಾಗಿದ್ದರಿಂದ ರೈತರಲ್ಲಿ ಸಂತಸ ಮೂಡಿದೆ.
ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ರಾಜಾಪುರ, ಕೊಯ್ನಾ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರೆದ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಶನಿವಾರ ಒಂದೇ ದಿನ 4.9 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.ಭಾನುವಾರ ಕೃಷ್ಣಾ ನದಿ ನೀರಿನ ಮಟ್ಟ ಇಳಿಯುವ ಸಂಭವವಿದೆ. ಹೀಗಾಗಿ ಪ್ರವಾಹದ ಆತಂಕ ಎದುರಿಸುತ್ತಿರುವ ನದಿ ತೀರದ ಜನ ನಿಟ್ಟುಸಿರು ಬಿಡುವಂತಾಗಿದೆ.

ಒಳಹರಿವು ಏರಿಕೆ:
ಬೆಳಗಾವಿ ಜಿಲ್ಲೆಯಲ್ಲಿ ಮಳೆ ರಭಸ ಕುಗ್ಗಿದೆ. ದೂಧ್‌ಗಂಗಾ ನದಿಯಿಂದ 13,200 ಕ್ಯುಸೆಕ್‌, ರಾಜಾಪುರ ಬ್ಯಾರೇಜ್‌ ಮೂಲಕ 54,240 ಕ್ಯುಸೆಕ್ ನೀರು ಸೇರಿ ಚಿಕ್ಕೋಡಿಯ ಕಲ್ಲೋಳ ಬಳಿ 67,440 ಕ್ಯುಸೆಕ್ ನೀರು ಕೃಷ್ಣಾ ನದಿಗೆ ಸೇರಿಕೊಳ್ಳುತ್ತಿದೆ. ಶಿವಮೊಗ್ಗ, ಕೊಡಗು ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.

ಕರಾವಳಿಯಲ್ಲಿ ಮಳೆ ಸಾಧ್ಯತೆ:
ಕರಾವಳಿ ಭಾಗದಲ್ಲಿ ಜೂ.21ರಿಂದ 25ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಐದೂ ದಿನಗಳವರೆಗೆ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.

ಚಾಮರಾಜ ನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗುವ ಸಂಭವವಿದ್ದು, ಭಾನುವಾರದಂದು 'ಯೆಲ್ಲೊ ಅಲರ್ಟ್' ಘೋಷಿಸಿದೆ. ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ.