News

ಬರೋಬ್ಬರಿ 10 ಕೋಟಿ ರೂ. ಮೌಲ್ಯದ ಭೂ ಒತ್ತುವರಿ ತೆರವು!

03 July, 2023 2:46 PM IST By: Maltesh
Clearance of land encroachment worth!

ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ರೂ 10.48 ಕೋಟಿ ಮೌಲ್ಯದ ಒಟ್ಟು 2 ಕೆರೆಗಳು ಸೇರಿದಂತೆ ಒಟ್ಟು 4.14 ಎಕರೆ/ಗುಂಟೆ ವಿಸ್ತೀರ್ಣದ ಕೆರೆ, ಕುಂಟೆ, ಗೋಮಾಳ,

ಸ್ಮಶಾನ, ರಾಜುಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳ ಅನಧಿಕೃತ ಒತ್ತುವರಿಯನ್ನು ಇಂದು ವಿಶೇಷ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ ಅವರು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಹೊನ್ನಿಗನಹಟ್ಟಿ ಗ್ರಾಮದ ರೂ 5 ಕೋಟಿ ಮೌಲ್ಯದ 0-02 ವಿಸ್ತೀರ್ಣದ ಗೋಮಾಳ ಜಮೀನು, ಕೆಂಗೇರಿ ಹೋಬಳಿಯ ಗುಡಿಮಾವು ಗ್ರಾಮದ ರೂ 40 ಲಕ್ಷ ಮೌಲ್ಯದ 0-07 ವಿಸ್ತೀರ್ಣದ ಗುಂಡು ತೋಪು ಹಾಗೂ ಉತ್ತರಹಳ್ಳಿ ಹೋಬಳಿಯ ರಾವುಗೋಡ್ಲು ಗ್ರಾಮದ ರೂ 1 ಕೋಟಿ ಮೌಲ್ಯದ 0-23 ವಿಸ್ತೀರ್ಣದ ಸ್ಮಶಾನ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ದಾಸನಾಯ್ಕನಹಳ್ಳಿ ಗ್ರಾಮದ ರೂ 60 ಲಕ್ಷ ಮೌಲ್ಯದ 1-0 ವಿಸ್ತೀರ್ಣದ ಸರ್ಕಾರಿ ಕಟ್ಟೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಹಲಸಹಳ್ಳಿ ತಿಪ್ಪಸಂದ್ರ ಗ್ರಾಮದ ರೂ 5 ಲಕ್ಷ ಮೌಲ್ಯದ 0-05 ವಿಸ್ತೀರ್ಣದ ಸರ್ಕಾರಿ ಕುಂಟೆ, ಜಿಗಣಿ ಹೋಬಳಿಯ ಹಿನ್ನಕ್ಕಿ ಗ್ರಾಮದ ರೂ 6 ಲಕ್ಷ ಮೌಲ್ಯದ 0-02 ವಿಸ್ತೀರ್ಣದ ಗುಂಡುತೋಪು ಹಾಗೂ ಜಿಗಣಿ ಹೋಬಳಿಯ ಹಿನ್ನಕ್ಕಿ ಗ್ರಾಮದ ರೂ 10 ಲಕ್ಷ ಮೌಲ್ಯದ 0-03 ವಿಸ್ತೀರ್ಣದ ಖರಾಬು ಬಂಡೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟು ರೂ 10.48 ಕೋಟಿ ಮೌಲ್ಯದ ಒಟ್ಟು 4-14 ಎ/ಗು ವಿಸ್ತೀರ್ಣದ ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.