ಚಿತ್ರದುರ್ಗ : ಸರಿಯಾದ ಸಮಯದಲ್ಲಿ ಬೆಳೆ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದರಿಂದ, ರೈತರಿಗೆ ಬೆಳೆ ವಿಮೆ ಪರಿಹಾರ ದೊರಕುವಲ್ಲಿ ನಷ್ಟ ಉಂಟಾಗುತ್ತದೆ.
ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದರೆ, ನಿರ್ಲಕ್ಷ್ಯ ತೋರಿದ ಅಧಿಕಾರಿ ವಿರುದ್ಧ ನಿರ್ಧಾಕ್ಷಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಎಚ್ಚರಿಕೆ ನೀಡಿದರು.
ಇದರಲ್ಲಿ ಯಾವುದೇ ರೀತಿಯ ತಪ್ಪು ಉಂಟಾಗಬಾರದು. ತಂತ್ರಾಂಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ತುಂಬಬೇಕು. ಬೆಳೆ ಕಟಾವು ಮಾಡಲು ನಿಯೋಜಿಸಿದ ಅಧಿಕಾರಿ ಹಾಗೂ ನೌಕರರೇ ಖುದ್ದಾಗಿ ರೈತರ ಜಮೀನಿಗೆ ತೆರಳಿ ಕಟಾವು ಪ್ರಯೋಗ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬೆಳ ಕಟಾವು ಪ್ರಯೋಗ ಮಾಡದೇ ಇದ್ದಲ್ಲಿ ಅಥವಾ ನಿರ್ಲಕ್ಷ್ಯದಿಂದ ತಪ್ಪಾಗಿ ಮಾಹಿತಿ ತುಂಬಿದರೆ ಕಟಾವು ಪ್ರಯೋಗ ಮಾಡಿದ ಅಧಿಕಾರಿಯನ್ನೇ ಹೊಣೆ ಮಾಡಲಾಗುವುದು. ಇದರಿಂದಾಗಿ ರೈತರಿಗೆ ಬೆಳೆ ವಿಮೆಯ ಮೊತ್ತ ದೊರಕದೇ ಹೋದಲ್ಲಿ ಅಥವಾ ಕಡಿಮೆ ಮೊತ್ತ ದೊರೆತರೆ, ಕಟಾವು ಪ್ರಯೋಗ ಕೈಗೊಂಡ ಅಧಿಕಾರಿಯ ವೇತನದಲ್ಲಿ ಕಟಾವುಗೊಳಿಸಿ, ರೈತರಿಗೆ ನಷ್ಟ ಪರಿಹಾರ ತುಂಬಿಕೊಡಲಾವುದು, ಅಧಿಕಾರಿಗಳು ಎಚ್ಚೆತ್ತುಕೊಂಡು, ಜಾಗ್ರತೆ ವಹಿಸಿ ಬೆಳೆ ಕಟಾವು ಪ್ರಯೋಗಳನ್ನು ನಿರ್ವಹಿಸಬೇಕು ಎಂದು ಎಚ್ಚರಿಸಿದರು.
ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಬೆಳೆ ಕಟಾವುಗಳನ್ನು ಸರಿಯಾದ ಸಮಯಕ್ಕೆ ನಡೆಸಬೇಕು. ಯಾವುದೇ ಸಬೂಬು ಸಲ್ಲದು. ಬೆಳೆ ಕಟಾವು ಪ್ರಯೋಗ ಕಡ್ಡಾಯವಾಗಿ ಕೈಗೊಳ್ಳಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಲಾಗುವುದು. ಶಿಸ್ತುಕ್ರಮ ಕೈಗೊಳ್ಳಲು ಆಯಾ ಇಲಾಖೆಗೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಮೊದಲನೇ ತ್ರೈಮಾಸಿಕ ಕೃಷಿ ಅಂಕಿ ಅಂಶಗಳು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳ ಕಟಾವು ಪ್ರಯೋಗ ಆಧರಿಸಿ, ಬೆಳೆ ವಿಮೆ ಕಂಪನಿಗಳು ಪ್ರತಿ ಬೆಳೆ ವಿಮೆಯ ಮೊತ್ತ ನಿರ್ಧರಿಸುತ್ತವೆ. ಹೊಬಳಿ, ತಾಲ್ಲೂಕು ಮಟ್ಟದ ಬೆಳೆ ವಿಮೆ ನಿಗದಿಗೆ ಸ್ಥಳೀಯವಾಗಿ ನಡೆಸಿದ ಬೆಳೆ ಕಟಾವು ಪ್ರಯೋಗವೇ ಆಧಾರ.
ಚಿತ್ರಕೃಪೆ : ಡಿಐಪಿಆರ್ ಚಿತ್ರದುರ್ಗ