ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಪ್ರಾಂಗಣದಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಒಣ ಮೆಣಸಿನಕಾಯಿ ಟೆಂಡರ್ ಹಾಕಲು ವರ್ತಕರು ನಿರ್ಧರಿಸಿದ್ದಾರೆ.
ಇಲ್ಲಿ ಮೊದಲು ವಾರದಲ್ಲಿ ಮೂರು ದಿನ ಟೆಂಡರ್ ನಡೆಯುತ್ತಿತ್ತು. ಈಗ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಒಂದೇ ದಿನ ಟೆಂಡರ್ ನಡೆಸಲಾಗುವುದು. ವ್ಯಾಪಾರಸ್ಥರು, ಖರೀದಿದಾರರು ರೈತರು ಸಹಕರಿಸಬೇಕೆಂದು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ಮನವಿ ಮಾಡಿದ್ದಾರೆ. ರೈತರು, ಖರೀದಿದಾರರು, ದಲಾಲರು ಸಹಕರಿಸಬೇಕು. ಟೆಂಡರ್ ದಿನ ಸಾಯಂಕಾಲ 7 ಗಂಟೆಯೊಳಗಾಗಿ ತಮ್ಮ ವ್ಯಾಪಾರ ವಹಿವಾಟನ್ನು ಬೇಗನೆ ಮುಗಿಸಿಕೊಂಡು ಮನೆಗೆ ತಲುಪಬೇಕೆಂದು ಕೋರಲಾಗಿದೆ.
ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂದೊಂದಿಗೆ ಶನಿವಾರ ಮತ್ತು ಭಾನುವಾರ ಪೂರ್ತಿ ದಿನ ಕರ್ಫ್ಯೂ ಹೇರಿದ್ದರಿಂದ ಅಂದಿನ ಎರಡು ದಿನಗಳ ಕಾಲ ಯಾವುದೇ ವ್ಯಾಪಾರ, ವಹಿವಾಟು ನಡೆಯುವುದಿಲ್ಲ. ಉಳಿದ ದಿನಗಳಲ್ಲಿ ಮಾರುಕಟ್ಟಯಲ್ಲಿ ಇತರೆ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹುಬ್ಬಳ್ಳಿ ಎಪಿಎಂಸಿಗೆ ಹಮಾಲಿ ಕಾರ್ಮಿಕರು ಜಿಲ್ಲೆಯಷ್ಟೇ ಅಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಬರುತ್ತಾರೆ. ಅವರಿಗೆ ಎಪಿಎಂಸಿಗೆ ಬಂದು ಹೋಗಲು ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.