News

ಮುಖ್ಯಮಂತ್ರಿ ರೈತ ವಿದ್ಯಾನಿಧಿ' ಯೋಜನೆಗೆ ಚಾಲನೆ: ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್, ಸಿಎಂ ಬೊಮ್ಮಾಯಿ ಮಹಾತ್ವಾಕಾಂಕ್ಷಿ ಕಾರ್ಯಕ್ರಮ

06 September, 2021 10:34 AM IST By:

ರೈತರ ಮಕ್ಕಳು ಉನ್ನತ ಶಿಕ್ಷಣಕ್ಕೆ ನೆರವಾಗಲು ದೇಶದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿ ವೇತನ ನೀಡುವ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ರೈತರ ಮಕ್ಕಳು ಆರ್ಥಿಕ ಸಂಕಷ್ಟ ಎದುರಿಸಬಾರದು. ರೈತರ ಮಕ್ಕಳು ಎಸ್ಎಲ್ಎಲ್ಸಿಯಿಂದ ಸ್ನಾತಕೋತ್ತರ ಕೋರ್ಸ್ ವರೆಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ನೀಡಲು ಈ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ಸುಮಾರು 17 ಲಕ್ಷ ರೈತರ ಮಕ್ಕಳಿಗೆ ಅನುಕೂಲವಾಗಲಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ’ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಖಾತೆಗೆ ನೇರ ವರ್ಗಾವಣೆ ಮಾಡುವ ಪ್ರಕ್ರಿಯೆಯ ಚಾಲನೆ ನೀಡಿದ ನಂತರ ಮಾತನಾಡಿ, ಕೃಷಿ ಅಭಿವೃದ್ಧಿಗೆ ಮತ್ತು ರೈತರ ಕಲ್ಯಾಣಕ್ಕಾಗಿ ಸರ್ಕಾರ ಮಾಡುವ ಖರ್ಚು ಖರ್ಚಲ್ಲ, ಅದು ಬಂಡವಾಳ ಹೂಡಿಕೆಯಾಗಿದೆ. ಶೇ. 1 ರಷ್ಟು ಕೃಷಿ ಅಭಿವೃದ್ಧಿ ಶೇ. 4 ರಷ್ಟು ಉತ್ಪಾದನಾ ವಲಯ ಮತ್ತು ಶೇ. 10 ರಷ್ಟು ಸೇವಾ ವಲಯದ ಅಭಿವೃದ್ಧಿಗೆ ಸಮ. ಹಾಗಾಗಿ, ಕೃಷಿ ಅಭಿವೃದ್ಧಿಗೆ ಹಣ ಖರ್ಚು ಮಾಡಿದರೆ ಅದರಿಂದ ಆದಾಯ ಹೆಚ್ಚುತ್ತದೆ. ಹಾಗಾಗಿ, ಕೃಷಿಗೆ ವೆಚ್ಚ ಮಾಡುವುದು ಖರ್ಚಲ್ಲ. ಬಂಡವಾಳ ಹೂಡಿಕೆ ಎಂದರು.
ರೈತರ ಆದಾಯ ದ್ವಿಗುಣವಾಗಿ ಕೃಷಿ ಲಾಭದಾಯಕವಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು, ಸ್ವಾತಂತ್ರ ಬಂದು ಇಷ್ಟು ವರ್ಷಗಳ ನಂತರ ಯಾವುದೇ ಒಬ್ಬ ನಾಯಕ ಯೋಚನೆ ಮಾಡದ್ದನ್ನು ಪ್ರಧಾನಿಗಳು ಯೋಚಿಸಿ ಅದನ್ನು ಕಾರ್ಯಗತ ಮಾಡಿದ್ದಾರೆ ಎಂದರು..
ರೈತನ ಕುಟುಂಬದಲ್ಲಿ ಯಾರಾದರು ಮದುವೆಗೆ ಬಂದರೆ, ಕಾಯಿಲೆಗೆ ಬಿದ್ದರೆ ರೈತ ಸಾಲಕ್ಕೆ ಸಿಲುಕುತ್ತಾನೆ. ಕಷ್ಟಗಳಿಗೆ ಒಳಗಾಗುತ್ತಾನೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದೆ ಈ ನಿಟ್ಟಿನಲ್ಲಿ ಯೋಜನೆ ರೂಪಿಸುವ ಇಂಗಿತ ವ್ಯಕ್ತಪಡಿಸಿದ ಅವರು, ರೈತನ ಆದಾಯ ಹೆಚ್ಚುವವರೆಗೂ ರೈತರ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದರು.
ರೈತನಿಗೆ ಆದಾಯ ಭದ್ರತೆ ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ಜಾರಿ ಮಾಡಿದ. ರೈತ ಕಲ್ಯಾಣಕ್ಕಾಗಿ ಕಟೀಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಗಳು ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟಿರುತ್ತಾರೆ. ಮುತ್ಸದ್ಧಿಗಳು ಮುಂದಿನ ಜನಾಂಗದ ಮೇಲೆ ಕಣ್ಣು ನೆಟ್ಟಿರುತ್ತಾರೆ. ಪ್ರಧಾನಿ ಮೋದಿ ಅಂತಹ ಒಬ್ಬ ಮುತ್ಸದ್ಧಿ, ಇಂತಹ ನಾಯಕರು ನಮಗೆ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದರು.
ರೈತರ ಸಮಗ್ರ ಆದಾಯವನ್ನು ಹೆಚ್ಚಿಸಲು ಸರ್ವ ಪ್ರಯತ್ನಗಳು ನಡೆದಿವೆ. ಬೆಳೆ ಕೊಯ್ಲಿನ ನಂತರ ಬೆಳೆಗಳಿಗೆ ಸೂಕ್ತ ಬೆಲೆ, ದಾಸ್ತಾನು ಎಲ್ಲದರ ಬಗ್ಗೆಯೂ ನಿಗಾ ವಹಿಸಬೇಕಿದೆ ಎಂದರು.

ಏನಿದು ರೈತ ವಿದ್ಯಾನಿಧಿ ಯೋಜನೆ

ಏನಿದು ಯೋಜನೆ: ಈ ಯೋಜನೆಯಿಂದ ಸುಮಾರು 17 ಲಕ್ಷ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಪಿಯುಸಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2,500 ರೂಪಾಯಿ. ಮತ್ತು ವಿದ್ಯಾರ್ಥಿನಿಯರಿಗೆ 3 ಸಾವಿರ ರೂಪಾಯಿಗಳನ್ನು ಹಣವನ್ನು ಸರ್ಕಾರ ನೀಡಲಿದೆ. ಇನ್ನು ಪದವೀಧರ ವಿದ್ಯಾರ್ಥಿಗಳಿಗೆ 5 ಸಾವಿರ ರೂ, ವಿದ್ಯಾರ್ಥಿನಿಗಳಿಗೆ 5,500 ರೂ. ಹಣವನ್ನು ಸರ್ಕಾರ ನೀಡಲಿದೆ. ಎಲ್ಎಲ್​ಬಿ, ಪ್ಯಾರಾಮೆಡಿಕಲ್, ಬಿ ಫಾರ್ಮ್, ನರ್ಸಿಂಗ್, ವೃತ್ತಿಪರ ಕೋರ್ಸ್​ಗಳ ವಿದ್ಯಾರ್ಥಿಗಳಿಗೆ 7,500 ರೂ, ನೀಡಿದರೆ, ವಿದ್ಯಾರ್ಥಿನಿಯರಿಗೆ 8 ಸಾವಿರ ರೂ. ಹಣವನ್ನು ರಾಜ್ಯ ಸರ್ಕಾರ ನೀಡುತ್ತದೆ.

ಎಂಬಿಬಿಎಸ್, ಬಿಇ, ಬಿ.ಟೆಕ್ ಸ್ನಾತಕೋತ್ತರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 10 ಸಾವಿರ, ವಿದ್ಯಾರ್ಥಿನಿಯರಿಗೆ 11,000 ರೂ. ಶಿಷ್ಯ ವೇತನ ನೀಡಲಾಗುವುದು. ನೋಂದಣಿಯಾದ ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆವರಿಗೆ ರಾಜ್ಯ ಸರ್ಕಾರ ಶಿಷ್ಯ ವೇತನ ನೀಡುತ್ತದೆ.