News

ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಗೆ ಆಯ್ಕೆಯಾದ ಮೋದಿ, ಫ್ರಾನ್ಸ್ ಅಧ್ಯಕ್ಷ

30 September, 2018 9:10 AM IST By:

ಹೊಸದಿಲ್ಲಿ: ಪ್ರಧಾನಿ ಮೋದಿಗೆ ವಿಶ್ವಸಂಸ್ಥೆ 'ಚಾಂಪಿಯನ್ಸ್ ಆಫ್‌ ದಿ ಅರ್ಥ್' ಪ್ರಶಸ್ತಿ ನೀಡಿ ಗೌರವಿಸಿದೆ. 2018ರ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವಕ್ಕೆ ಪ್ರಧಾನಿ ಮೋದಿ ಪಾತ್ರವಾಗಿದ್ದಾರೆ.

ಮೋದಿ ಜತೆಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಸಹ 'ಚಾಂಪಿಯನ್ಸ್ ಆಫ್‌ ದಿ ಅರ್ಥ್' ಗೌರವಕ್ಕೆ ಪಾತ್ರವಾಗಿದ್ದಾರೆ. ಅಂತಾರಾಷ್ಟ್ರೀಯ ಸೌರಶಕ್ತಿ ಅಲೈಯನ್ಸ್ ( ಐಎಸ್‌ಎ ) ಸ್ಥಾಪನೆಯಲ್ಲಿ ಪ್ರವರ್ತಕರಾಗಿ ಅನುಪಮ ಕೆಲಸ ಹಾಗೂ ಪರಿಸರ ಕ್ರಮದ ವಿಚಾರದಲ್ಲಿ ಸಹಕಾರ ಮಟ್ಟಗಳ ಹೊಸ ಪ್ರದೇಶಗಳನ್ನು ಉತ್ತೇಜಿಸುವ ಕೆಲಸ ಮಾಡಿದ್ದಕ್ಕೆ ಇಬ್ಬರನ್ನೂ ನೀತಿಯ ನಾಯಕತ್ವ ವರ್ಗದಲ್ಲಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ( ಯುಎನ್‌ಇಪಿ ) ತಿಳಿಸಿದೆ.

2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ (ಸಿಒಪಿ21) ದಲ್ಲಿ ಭಾರತ ಹಾಗೂ ಫ್ರಾನ್ಸ್ ಜಂಟಿಯಾಗಿ ಅಂತಾರಾಷ್ಟ್ರೀಯ ಸೌರಶಕ್ತಿ ಅಲೈಯನ್ಸ್ ( ಐಎಸ್‌ಎ )ಗೆ ಚಾಲನೆ ನೀಡಿತ್ತು. ಸೌರಶಕ್ತಿಯನ್ನು ಒಳಗೊಂಡ ವಿಶ್ವದ 121 ರಾಷ್ಟ್ರಗಳು ಇದರ ಭಾಗವಾಗಿದ್ದು, ಭಾರತದ ಹೊಸದಿಲ್ಲಿ ಬಳಿಯ ಗುರುಗ್ರಾಮದಲ್ಲಿ ಐಎಸ್‌ಎಯ ಮುಖ್ಯ ಕಚೇರಿಯನ್ನು ತೆರೆಯಲಾಗಿದೆ.

ಇನ್ನು, ಪರಿಸರದ ಜಾಗತಿಕ ಒಪ್ಪಂದಕ್ಕಾಗಿ ಮಾಡುತ್ತಿರುವ ಕೆಲಸಕ್ಕಾಗಿ ಮ್ಯಾಕ್ರನ್‌ ಅನ್ನು ಈ ಪ್ರಶಸ್ತಿಗೆ ಯುಎನ್‌ಇಪಿ ಆಯ್ಕೆ ಮಾಡಿದೆ. ಅಲ್ಲದೆ, 2022ರೊಳಗೆ ಭಾರತದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನು ಮಾಡುವುದಕ್ಕೆ ಪ್ರಧಾನಿ ಮೋದಿ ಸಂಕಲ್ಪ ತೊಟ್ಟಿರುವುದಕ್ಕೆ ಸಹ 'ಚಾಂಪಿಯನ್ಸ್ ಆಫ್‌ ದಿ ಅರ್ಥ್‌' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಲ್ಲದೆ, ವಿಶ್ವದ ಮೊದಲ ಸಂಪೂರ್ಣ ಸೌರಶಕ್ತಿ ಅವಲಂಬಿತ ವಿಮಾನ ನಿಲ್ದಾಣವಾದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹ ಪ್ರಶಸ್ತಿಗೆ ಆಯ್ಕೆಯಾಗಿದೆ.