ಮುಂಗಾರು ಅವಧಿಯ ಬೆಳೆಗಳ ಮಾರುಕಟ್ಟೆ ಅವಧಿ ಆರಂಭವಾಗಿದ್ದರಿಂದ ದೇಶದಲ್ಲಿ ಕನಿಷ್ಟ ಬೆಂಬಲ ಬೆಲೆಗೆ (ಎಂ.ಎಸ್.ಪಿ) ಖರೀದಿಸುವ ಪ್ರಕ್ರಿಯೆಯನ್ನು ಮುಂದುವರೆಸಲಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.
2020 ರ ಅಕ್ಟೋಬರ್ 7ರವರೆಗೆ ಸರ್ಕಾರ ತನ್ನ ನೋಡಲ್ ಏಜೆನ್ಸಿಗಳ ಮೂಲಕ 376.65 ಮೆಟ್ರಿಕ್ ಟನ್ ಪಚ್ಚೆ ಹೆಸರು ಖರೀದಿಸಿದೆ.
2.71 ಕೋಟಿ ಕನಿಷ್ಟ ಬೆಂಬಲ ಬೆಲೆ ಮೌಲ್ಯದ 376.65 ಮೆಟ್ರಿಕ್ ಟನ್ ಖರೀದಿಸಲಾಗಿದೆ ಇದರಿಂದ ತಮಿಳುನಾಡು ಮತ್ತು ಕರ್ನಾಟಕದ 3961 ರೈತರಿಗೆ ಪ್ರಯೋಜನವಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಟ್ವಿಟ್ ಮಾಡಿದೆ.
ಕೇಂದ್ರ ಸರ್ಕಾರವು ಇತ್ತೀಚೆಗೆ ಸಂಸತಿನಲ್ಲಿ ಅನುಮೋದನೆ ಪಡೆದಿರುವ ಹೊಸ ಕೃಷಿ ಮಸೂದೆಗಳಿಂದ ಕನಿಷ್ಟ ಬೆಂಬಲ ಬೆಲೆ ರದ್ದಾಗಲಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೆ ಈ ಟ್ವೀಟ್ ಮಾಡಲಾಗಿದೆ.
ಕೇಂದ್ರ ಸರ್ಕಾರ ವಿರುದ್ಧ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ದೇಶಾದ್ಯಂತ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಮಸೂದೆ ವಿರೋಧಿಸಿ ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರತೆ ಹೆಚ್ಚಾಗಿದ್ದರಿಂದ ಎರಡು ದಿನಗಳ ಮುಂಚೆಯೇ ಕೇಂದ್ರ ಸರ್ಕಾರ ಸೀಸನ್ ಗೂ ಮುನ್ನವೇ ಭತ್ತ ಖರೀದಿಗೆ ಆದೇಶಿಸಿತ್ತು.
ಈ ವರ್ಷ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ, ಹರಿಯಾಣ, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶಗಳಿಂದ 30.70 ಲಕ್ಷ ಮೆಟ್ರಿಕ್ ಟನ್ ಖಾದ್ಯ ಮತ್ತು ಎಣ್ಣೆ ಬೀಜಗಳ ಖರೀದಿಗೆ ಸಮ್ಮತಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಇದರೊಂದಿಗೆ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮತ್ತು ಕೇರಳ ರಾಜ್ಯದಿಂದ 1.23 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ನಿರ್ಧರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವಾಲಯ ತಿಳಿಸಿದೆ.