ಕೋವಿಡ್ ಎರಡನೇ ಅಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಡವರಿಗೆ ಮುಂದಿನ ಎರಡು ತಿಂಗಳುಗಳ ಕಾಲ (ಮೇ-ಜೂನ್) ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಉಚಿತ ಆಹಾರ ಧಾನ್ಯ ವಿತರಿಸುವುದನ್ನು ಪುನಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರವು ಶುಕ್ರವಾರ ಹೇಳಿದೆ.
ಲಾಕ್‌ಡೌನ್ ಮಾದರಿಯ ನಿರ್ಬಂಧ ಮತ್ತು ಆರ್ಥಿಕ ಚಟುವಟಿಕೆ ಸ್ಥಗಿತದಿಂದ ಸಂಕಷ್ಟಕ್ಕೀಡಾಗುವ ದೇಶದ ಕಡು ಬಡವರ್ಗಕ್ಕೆ ಉಚಿತ ಆಹಾರ ಧಾನ್ಯ ಒದಗಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಮೇ ಮತ್ತು ಜೂನ್ ತಿಂಗಳುಗಳಲ್ಲಿ ಬಡವರಿಗೆ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡುವುದಾಗಿ ಶುಕ್ರವಾರ ಘೋಷಿಸಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ)ಯ ಅನ್ವಯ ಸಾರ್ವಜನಿಕ ವಿತರಣ ವ್ಯವಸ್ಥೆಯ ಫಲಾನುಭವಿಗಳಿಗೆ 2 ತಿಂಗಳ ಕಾಲ ಹೆಚ್ಚುವರಿ 5 ಕೆ.ಜಿ. ಆಹಾರಧಾನ್ಯ ಒದಗಿಸಲಾಗುವುದು. ಒಟ್ಟು 80 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 6 ಕೆಜಿ ಉಚಿತ ಆಹಾರ ಧಾನ್ಯ ವಿತರಿಸಲಾಗುವುದು ಆದರೆ ಈ ಬಾರಿ ದ್ವಿದಳ ಧಾನ್ಯಗಳನ್ನು ನೀಡುವುದಿಲ್ಲ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣ ವ್ಯವಸ್ಥೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಪ್ಎಸ್ಎ) ಅಡಿಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ತಿಂಗಳಿಗೆ 5 ಕೆಜಿ ಗೋಧಿ, ಅಕ್ಕಿಯ ಜೊತೆಗೆ 1 ಕೆಜಿ ದ್ವಿದಳ ಧಾನ್ಯ ವಿತರಿಸಲಾಗುತ್ತಿತ್ತು. ಆದರೆ, ಈ ಬಾರಿ ದ್ವಿದಳ ಧಾನ್ಯ ವಿತರಿಸಲಾಗುವುದಿಲ್ಲ . ರಾಜ್ಯದಲ್ಲಿ ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಗುತ್ತಿರುವ 5 ಕೆ.ಜಿ. ಆಹಾರಧಾನ್ಯದ ಜತೆಗೆ ಹೆಚ್ಚುವರಿಯಾಗಿ ಈ ಆಹಾರಧಾನ್ಯ ದೊರೆಯಲಿದೆ.
ರಾಷ್ಟ್ರೀಯ ಆಹಾರ ಭದ್ರತ ಕಾಯ್ದೆಯಡಿ ನೋಂದಣಿಯಾದ 80 ಕೋಟಿ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಕೇಂದ್ರ ಸರಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಜಾರಿ ಮಾಡಿತ್ತು. ಆರಂಭದಲ್ಲಿ ಜುಲೈವರೆಗೆ 3 ತಿಂಗಳು ಉಚಿತ ಆಹಾರ ಧಾನ್ಯ ನೀಡಲಾಗಿತ್ತು. ಬಳಿಕ ನವೆಂಬರ್‌ವರೆಗೆ ವಿಸ್ತರಿಸಲಾಗಿತ್ತು. ಆಗ ಪ್ರತೀ ಕುಟುಂಬಕ್ಕೆ ತಿಂಗಳಿಗೆ 5 ಕೆ.ಜಿ. ಗೋಧಿ, ಅಕ್ಕಿ, 1 ಕೆ.ಜಿ. ದ್ವಿದಳ ಧಾನ್ಯ ವಿತರಿಸಲಾಗುತ್ತಿತ್ತು. ಈ ವರ್ಷ ಕೇವಲ ಆಹಾರಧಾನ್ಯಗಳನ್ನು ಮಾತ್ರ ನೀಡಲಾಗುತ್ತದೆ. 2 ತಿಂಗಳ ಈ ಯೋಜನೆಗೆ 80 ಲಕ್ಷ ಟನ್ ಧಾನ್ಯದ ಅಗತ್ಯವಿದ್ದು, 26 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಪಾಂಡೆ ಹೇಳಿದ್ದಾರೆ.