News

ಆನ್‌ಲೈನ್‌ ತರಗತಿಯಲ್ಲಿನ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಸೆ. 21 ರಿಂದ ಶಿಕ್ಷಕರ ಭೇಟಿಗಾಗಿ ವಿದ್ಯಾರ್ಥಿಗಳಿಗೆ ಅನುಮತಿ

09 September, 2020 8:32 AM IST By:

ಸೆಪ್ಟೆಂಬರ್ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಇದೇ 21ರಿಂದ ಶಿಕ್ಷಕರ ಮಾರ್ಗದರ್ಶನ ಪಡೆಯುವ ಸಲುವಾಗಿ ಶಾಲೆಗಳಿಗೆ ಸ್ವಇಚ್ಛೆಯಿಂದ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಮಂಗಳವಾರ ಇದಕ್ಕೆ ಸಂಬಂಧಿಸಿದ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ.

ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ನಿಯಮಾ­ವಳಿಯಲ್ಲಿ ''ಇದು ನಿಯಮಿತ ತರಗತಿ ಅಲ್ಲ. ಆನ್‌ಲೈನ್‌ ತರಗತಿಯಲ್ಲಿನ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಶಿಕ್ಷಕರ ಭೇಟಿಗಾಗಿ 9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿದ್ದೇವೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರ ಲಿಖಿತ ಒಪ್ಪಿಗೆ ಅಗತ್ಯ. ಹಂತಹಂತವಾಗಿ ತಂಡಗಳಲ್ಲಿ ಮಾತ್ರ ಭೇಟಿ ನಡೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುರಿಸಿಯೇ ಶಾಲಾ-ಕಾಲೇಜುಗಳು ನಿಧಾನವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬೇಕು  ಎಂದು ಸೂಚಿಸಲಾಗಿದೆ.

ವಿದ್ಯಾರ್ಥಿಗಳು ಕನಿಷ್ಠ 6 ಅಡಿ ಶಾರೀರಿಕ ಅಂತರ ಕಾಪಾಡಿಕೊಳ್ಳಬೇಕು. ಅದೇ ರೀತಿ, ಸಿಬಂದಿ ಕೊಠಡಿ, ಕಚೇರಿಗಳು, ಗ್ರಂಥಾ­ಲಯ, ಕೆಫೆಟೇರಿಯಾಗಳಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯ. ಶಾಲೆಗಳಲ್ಲಿ ಅಸೆಂಬ್ಲಿ, ಕ್ರೀಡೆ ಮತ್ತಿತರ ಕಾರ್ಯಕ್ರಮ ನಡೆಸುವಂತಿಲ್ಲ. ಕ್ಯಾಂಪಸ್‌ನಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗ, ಸಿಬಂದಿ ಮಾಸ್ಕ್ ಧರಿಸುವುದು ಕಡ್ಡಾಯ. ವಿದ್ಯಾರ್ಥಿಗಳೇ ಸ್ವಯಂಪ್ರೇರಿತರಾಗಿ ಬರಬೇಕು, ಬಲವಂತ ಮಾಡುವ ಹಾಗಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.

ವಿದ್ಯಾರ್ಥಿ ಅಥವಾ ಶಿಕ್ಷಕರು ಅಥವಾ ಶಾಲಾ-ಕಾಲೇಜು ಸಿಬ್ಬಂದಿ ಕೊರೊನಾ ಕಂಟೈನ್‌ಮೆಂಟ್‌ ವಲಯಗಳಲ್ಲಿ ವಾಸವಿದ್ದರೆ ಅಂಥವರು ಶಾಲಾ-ಕಾಲೇಜು ಪ್ರವೇಶಿಸುವಂತಿಲ್ಲ. ಅಲ್ಲದೆ ಶಾಲೆಯಿಂದಲೂ ಕೂಡ ಯಾರೂ ಕಂಟೈನ್‌ಮೆಂಟ್‌ ವಲಯಗಳಿಗೆ ಭೇಟಿ ನೀಡುವಂತಿಲ್ಲ.