News

ಅಂತಾರಾಜ್ಯದಲ್ಲಿ ಸಿಲುಕಿರುವ ವಲಸಿಗರ ಪ್ರಯಾಣ ಇನ್ನುಮುಂದೆ ಸಲೀಸು

01 May, 2020 8:52 PM IST By:

ಲಾಕ್‍ಡೌನ್‍ನಿಂದಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರವ ವಲಸೆ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಯಿಂದ ಎಚ್ಚೆತ್ತ ಕೇಂದ್ರ ಸರ್ಕಾರ ಅವರಿಗೆ ತಮ್ಮೂರಿಗೆ ಮರಳಲು ಅನುಮತಿ ನೀಡಿದೆ.
ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರು ತಮ್ಮ ಮನೆಗಳಿಗೆ ಮರಳಲು ಇಚ್ಚಿಸಿದರೆ ಅವರನ್ನು ಬಸ್‍ಗಳ ಮೂಲಕ ಕಳುಹಿಸಿಕೊಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಸುತ್ತೋಲೆ ಹೊರಡಿಸಿದ್ದಾರೆ. ವ್ಯಕ್ತಿ ಅಥವಾ ಕುಟುಂಬಗಳು ಖಾಸಗಿ ವಾಹನದಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ. ರಾಜ್ಯ ಸರ್ಕಾರಗಳು ಮಾತ್ರ ವಲಸಿಗರ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಲಾಕ್ಡೌನ್ ಘೋಷಿಸಿದಾಗಲೇ ಜನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಸಾವಿರಾರು ಜನರು ನಡೆದೇ ತಮ್ಮ ಊರುಗಳಿಗೆ ಮರಳಿದ್ದರು. ಮಾರ್ಗ ಮಧ್ಯದಲ್ಲಿ ಹಲವರು ಮೃತಪಟ್ಟಿದ್ದರು. ಇದು ಗಂಭೀರ ಬಿಕ್ಕಟ್ಟಿಗೆ ಕಾರಣವಾಗಿತ್ತು. ಪರಿಣಾಮವಾಗಿ, ವಲಸಿಗರ ಸಂಚಾರಕ್ಕೆ ಅವಕಾಶ ಕೊಡಬಾರದು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಈ ಜನರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡುವಂತೆ ಸೂಚಿಸಿತ್ತು. ಇದರಿಂದ ಹತಾಶರಾಗಿದ್ದ ಕಾರ್ಮಿಕರು ಪ್ರತಿಭಟನೆಗಳನ್ನೂ ನಡೆಸಿದ್ದರು.

ಮನೆಗೆ ಮರಳಲು ಷರತ್ತುಗಳು: ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೋಡಲ್ ಅಧಿಕಾರಿ/ಸಂಸ್ಥೆಗಳನ್ನು ನೇಮಿಸಬೇಕು. ರಾಜ್ಯದಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಗಳನ್ನು ಈ ನೋಡಲ್ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಬೇಕು. ಸಿಲುಕಿಕೊಂಡಿರುವವರನ್ನು ಕಳುಹಿಸಲು ಮತ್ತು ಬರಮಾಡಿಕೊಳ್ಳಲು ರಾಜ್ಯ ಸರ್ಕಾರಗಳು ಮಾನದಂಡಗಳನ್ನು ರೂಪಿಸಬೇಕು
ವಾಪಸ್ಸು ಹೋಗಬಯಸುವವರಿಗೆ  ತಪಾಸಣೆ ಕಡ್ಡಾಯ.ಕೊರೋನಾ ಸೋಂಕಿನ ಲಕ್ಷಣವಿಲ್ಲದಿದ್ದರೆ ಮಾತ್ರ ತೆರಳಲು ಸ್ಥಳೀಯ ಆಡಳಿತ ಅನುಮತಿ ನೀಡಬೇಕು. ಈ ಜನರ ಪ್ರಯಾಣಕ್ಕೆ ಬಸ್‍ಗಳನ್ನು ಬಳಸಬಹುದು. ಆದರೆ, ಅಂತರ ಕಾಯ್ದುಕೊಳ್ಳುವಿಕೆ ನಿಯಮ ಪಾಲನೆ ಆಗಬೇಕು. ಬಸ್‍ನಲ್ಲಿ ಸಂಚರಿಸುವಾಗಿ ಮಾಸ್ಕ್‍ಗಳನ್ನು ಧರಿಸಬೇಕು.ಬಸ್ಗಳನ್ನು ಸೋಂಕುನಿರೋಧಕ ಸಿಂಪಡಿಸಬೇಕು. ತವರು ರಾಜ್ಯ ತಲುಪಿದ ಜನರನ್ನು ಸ್ಥಳೀಯ ಆರೋಗ್ಯ ಇಲಾಖೆಯು ತಪಾಸಣೆಗೆ ಒಳಪಡಿಸಬೇಕು. ಸಾಂಸ್ಥಿಕ ಕ್ವಾರಂಟೈನ್ ಅಗತ್ಯ ಇರುವವರನ್ನು ಬಿಟ್ಟು ಇತರರನ್ನು ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿ ಇರಿಸಬೇಕು.
ಕೇಂದ್ರದ ಈ ನಿರ್ಧಾರವು ಲಾಕ್‍ಡೌನ್ ಮುಗಿಯುವ ಮೇ 3 ರವರೆಗೆ ಅನ್ವಯಿಸುತ್ತದೆ.ಇದರಿಂದ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಲಕ್ಷಾಂತರ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ.