News

ಕಳೆದ ವರ್ಷದಂತೆ ಈ ವರ್ಷವೂ ರೈತರಿಗೆ ಡಿಎಪಿ 1200 ರೂಪಾಯಿಗೆ ಸಿಗಲಿದೆ

20 May, 2021 9:44 AM IST By:

ಕೊರೋನಾ ಎರಡನೇ ಅಲೆಯಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಕಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಇತ್ತೀಚೆಗೆ ರಸಗೊಬ್ಬರ ಬೆಲೆ ಏಕಾಏಕಿ ಗಗನಕ್ಕೇರಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಡಿಎಪಿ ಬೆಲೆ ಬರೋಬ್ಬರಿ 700 ರೂಪಾಯಿ ಏರಿಕೆಯಾಗಿದ್ದರಿಂದ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಕೊನೆಗೂ ರೈತರಿಗೆ ಕಡಿಮೆ ದರದಲ್ಲಿ ಡಿಎಪಿ ಸಿಗಬೇಕೆಂದು ಡಿಎಪಿ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಯ ಪ್ರಮಾಣವನ್ನು ಶೇಕಡಾ 140 ರಷ್ಟು ಹೆಚ್ಚಿಸಿದೆ.ಮುಂಗಾರು ಆರಂಭದ ಹೊತ್ತಿನಲ್ಲೇ ಡಿಎಪಿ ರಸಗೊಬ್ಬರದ ಸಬ್ಸಿಡಿಯನ್ನು ಹೆಚ್ಚಿಸಿದೆ.

ಬುಧವಾರ ಪ್ರಧಾನಮಂತ್ರಿ  ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಪ್ರಧಾನಿಯವರ ಕಚೇರಿಯ ಹೇಳಿಕೆ ತಿಳಿಸಿದೆ.

ಡಿಎಪಿಯ ಪ್ರತಿ ಚೀಲಕ್ಕೆ ನೀಡುತ್ತಿದ್ದ 500 ರೂಪಾಯಿ ಸಬ್ಸಿಡಿಯನ್ನು 1200 ಕ್ಕೆ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಈ ತೀರ್ಮಾನದಿಂದಾಗಿ ಇನ್ನೂ ಮುಂದೆ  ರೈತರು 1200 ರೂಪಾಯಿಗೆ ಒಂದು ಚೀಲ ಡಿಎಪಿ ಪಡೆಯಲಿದ್ದಾರೆ. ಬೆಲೆಯಲ್ಲಿ ಆಗಿರುವ ಹೊರೆಯನ್ನು ತಾನೇ ಹೊರುವ ತೀರ್ಮಾನವನ್ನು ಕೇಂದ್ರಕೈಗೊಂಡಿದೆ. ಇದಕ್ಕೆ ಸರ್ಕಾರವು 14,775 ಕೋಟಿ ರೂಪಾಯಿ ವಿನಿಯೋಗಿಸಲಿದೆ.

ಕಳೆದ  ವರ್ಷ ಒಂದು ಚೀಲ ಡಿಎಪಿ ಬೆಲೆ 1700 ಆಗಿತ್ತು. ಇದಕ್ಕೆಕೇಂದ್ರ 500 ರೂಪಾಯಿ ರಷ್ಟು ಸಬ್ಸಿಡಿ ನೀಡುತ್ತಿತ್ತು. ಹಾಗಾಗಿ ಕಂಪನಿಗಳು ರಸಗೊಬ್ಬರವನ್ನು ರೈತರಿಗೆ ಪ್ರತಿ ಚೀಲಕ್ಕೆ 1200 ರಂತೆ ಮಾರಾಟ ಮಾಡುತ್ತಿದ್ದವು. ಆದರೆ ಕಳೆದ ತಿಂಗಳು ಏಕಾಏಕಿ ಪ್ರತಿ 50ಕೆಜಿ ಚೀಲಕ್ಕೆ 700 ರೂಪಾಯಿ ಹೆಚ್ಚಾಗಿದ್ದರಿಂದ ಪ್ರತಿ ಚೀಲಕ್ಕೆ 1900 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದರಿಂದಾಗಿ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

'ಬೆಲೆ ಏರಿಕೆಯ ಎಲ್ಲ ಹೊರೆಯನ್ನು ಹೊರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸಬ್ಸಿಡಿ ಮೊತ್ತ ಹೆಚ್ಚಿಸಿದೆ. ಇನ್ನೂ ಮುಂದೆ ರೈತರಿಗೆ ಹಳೆ ದರವಾದ 1200 ರೂಪಾಯಿಗೆ ಒಂದು ಚೀಲ ಡಿಎಪಿ ಸಿಗಲಿದೆ.

ಪಾಸ್ಫರಿಕ್ ಆಸಿಡ್ ಹಾಗೂ ಅಮೋನಿಯಾ ದರ ಹೆಚ್ಚಳದಿಂದ ಡಿಎಪಿ ಗೊಬ್ಬರ ಬೆಲೆ ಶೇ. 60 ರಿಂದ 70 ರಷ್ಟು ಹೆಚ್ಚಾಗಿತ್ತು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.