News

ಎಪಿಎಂಸಿಗಳಿಗೆ 1 ಲಕ್ಷ ಕೋಟಿ ರೂಪಾಯಿಯವರೆಗೆ ನೆರವು- ತೋಮರ್

09 July, 2021 10:48 AM IST By:
Narendrasingh tomar

ಕೃಷಿ ಉತ್ಪನ್ನ ಮಾರುಕಟ್ಟೆಗಳ ಮೂಲಕ ರೈತರ ಅಮೂಲಾಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಒಂದು ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ದೆಹಲಿಯಲ್ಲಿ ಸಂಪುಟ ಪುನರ್ ರಚನೆಗೊಂಡ ನಂತರ ಗುರುವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೃಷಿ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸಲು ಕೇಂದ್ರ 1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಇದನ್ನು ಅಗ್ರಿಕಲ್ಚರ್ ಪ್ರೊಡ್ಯೂಸ್ ಆಂಡ್ ಲೈವ್ ಸ್ಟಾಕ್ ಮಾರ್ಕೇಟ್ ಕಮಿಟಿಗಳ (ಎಪಿಎಂಸಿ) ಮೂಲಕ ಕೃಷಿಕರ ಒಳಿತಿಗಾಗಿ ಬಳಸಲಾಗುತ್ತಿದೆ. ಎಪಿಎಂಸಿಗಳಿಗೆ ಹೆಚ್ಚಿನ ಸಂಪನ್ಮೂಲ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗ 1 ಲಕ್ಷ ಕೋಟಿ ಮೂಲ ಸೌಕರ್ಯ ನಿಧಿಗೆ ನೀಡಲಾಗುತ್ತಿದೆ ಇದನ್ನು ಎಪಿಎಂಸಿಗಳ ಮೂಲಕ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಅಂಗೀಕರಿಸಿರುವ ಕೃಷಿ ಕಾನೂನುಗಳಲ್ಲಿ ಇರುವ ಲೋಪದೋಷ ಸರಿಪಡಿಸುವುದಕ್ಕಾಗಿ ಸರ್ಕಾರ ಸಿದ್ದವಾಗಿದೆ. ಆದರೆ ಚರ್ಚೆಗೆ ಬಾರದೆ, ಲೋಪದೋಷಗಳನ್ನು ಸರಿಯಾಗಿ ತಿಳಿಸದೆ ಪ್ರತಿಭಟನೆ ಮುಂದುವರೆಸಿದರೆ ಅದನ್ನು ಪುರಸ್ಕರಿಸಲಾಗದು. ಪ್ರತಿಭಟನಾ ನಿರತರ ಜತೆಗೆ ಮಾತುಕತೆಗೆ ಸರ್ಕಾರ ಸಿದ್ದವಿದೆ ಎಂದರು.

ಹೊಸ ಕೃಷಿ ಕಾಯ್ದೆಗಳು ಜಾರಿಯಾದರೆ ಎಪಿಎಂಸಿಗಳು ರದ್ದುಪಡಿಸಲಾಗುವುದು ಎಂಬ ಆತಂಕವಿದೆ. ಆದರೆ ಎಪಿಎಂಸಿ ಮಾರುಗಟ್ಟೆಗಳನ್ನು ಮುಚ್ಚಲಾಗುವುದಿಲ್ಲ. ಮೂರು ಕೃಷಿ ಕಾನೂನುಗಳ ಅನುಷ್ಠಾನದ ಬಳಿಕೆ ಎಪಿಎಂಸಿಗಳಿಗೆ ಎಐಎಪ್ ನಿಂದ ಹಣ ದೊರೆಯಲಿದೆ ಎಂದ ಅವರು, ವಿವಾದಾತ್ಮಕ ಕಾಯ್ದೆಗಳ ವಿರುದ್ಧ ರೈತರು ಹೋರಾಟ ಕೈಬಿಟ್ಟು ಸರ್ಕಾರದೊಂದಿಗೆ ಮಾತುಕತೆಗೆಮುಂದೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.

ತೆಂಗು ಮಂಡಳಿಗೆ ರೈತನೇ ಅಧ್ಯಕ್ಷ

ತೆಂಗಿನ ಕೃಷಿ ಹೆಚ್ಚಿಸುವುದಕ್ಕಾಗಿ ತೆಂಗು ಮಂಡಳಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಅಧಿಕಾರಿ ವರ್ಗಕ್ಕೆ ಹೊರತಾದವರೂ ತೆಂಗು ಮಂಡಳಿ ಅಧ್ಯಕ್ಷರಾಗಲಿದ್ದಾರೆ.

ತೆಂಗು ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ತೆಂಗು ಅಭಿವೃದ್ಧಿ ಮಂಡಳಿ ಕಾಯ್ದೆ 1979ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ತೆಂಗು ಕೃಷಿಯನ್ನು ಹೆಚ್ಚಿಸಲು, ನಾವು ತೆಂಗು ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿದ್ದೇವೆ. ತೆಂಗು ಮಂಡಳಿಯ ಅಧ್ಯಕ್ಷರು ಅಧಿಕಾರೇತರ ವ್ಯಕ್ತಿಯಾಗಲಿದ್ದಾರೆ. ಅವರು ರೈತ ಸಮುದಾಯದಿಂದ ಬಂದವರು, ಅವರು ಕ್ಷೇತ್ರದ ಕೆಲಸವನ್ನು ತಿಳಿದಿದ್ದಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ.  ಜತೆಗೆ ಸಚಿವ ಸಂಪುಟ ಸಭೆಯಲ್ಲಿ 736 ಜಿಲ್ಲೆಗಳಲ್ಲಿ ಮಕ್ಕಳ ಚಿಕಿತ್ಸೆಗೆ 20,000 ಐಸಿಯು ಬೆಡ್​ಗಳ ವ್ಯವಸ್ಥೆ​ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.