ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಸ್ವನಿಧಿ ಯೋಜನೆಗಳಡಿ ಬ್ಯಾಂಕುಗಳು ವಿಳಂಬ ಧೋರಣೆ ಅನುಸರಿಸದೆ ತ್ವರಿತವಾಗಿ ಸಾಲ ವಿತರಣೆ ಮಾಡಲು ಕ್ರಮಕೈಗೊಳ್ಳಬೇಕೆಂದು ಬ್ಯಾಂಕರುಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದರು.
ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಗಳ ಪ್ರಗತಿ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ ವಿವಿಧ ನಗರಗಳಲ್ಲಿ ಸಾಲ ಮಂಜೂರಾದರೂ ವಿತರಣೆಯಾಗದಿರುವ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ವೇಳಾಪಟ್ಟಿ ನಿಗದಿಪಡಿಸಿ, ಸಾಲ ವಿತರಣೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಸ್ವನಿಧಿ ಯೋಜನೆಗಳಡಿ ಬ್ಯಾಂಕರುಗಳು ವಿಳಂಬ ಧೋರಣೆ ಅನುಸರಿಸದೆ ತ್ವರಿತವಾಗಿ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಡವರಿಗಾಗಿ ಜಾರಿಗೊಳಿಸಿರುವ ಮಹತ್ವಾಕಾಂಕ್ಷೆಯ ಯೋಜನೆಗಳು. ಇವುಗಳ ಅನುಷ್ಠಾನಕ್ಕೆ ಬ್ಯಾಂಕರುಗಳು ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದರು.
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈ ಎರಡೂ ಯೋಜನೆಗಳ ಪ್ರಗತಿ ಕುಂಠಿತವಾಗಿದೆ. ಈ ಯೋಜನೆಗಳಡಿ ಸಾಲ ಮಂಜೂರಾತಿ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಆದ್ಯ ಗಮನ ಹರಿಸುವಂತೆ ಬ್ಯಾಂಕರುಗಳಿಗೆ ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು 15 ದಿನಗಳೊಳಗೆ ಆಯಾ ಜಿಲ್ಲೆಗಳ ಲೀಡ್ ಬ್ಯಾಂಕ್ ಗಳಿಗೆ ಸಲ್ಲಿಸಲಾಗುವುದು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಅವುಗಳನ್ನು ವಿವಿಧ ಬ್ಯಾಂಕುಗಳಿಗೆ ಕಳುಹಿಸಿ, ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಿಎಂ ಸೂಚಿಸಿದರು.
ಈವರೆಗೆ 2,24,368 ಅರ್ಜಿಗಳನ್ನು ಯೋಜನೆಯಡಿ ಸ್ವೀಕರಿಸಲಾಗಿದ್ದು, ಕೇವಲ 66,423 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ರಾಜ್ಯದ ಬ್ಯಾಂಕುಗಳು ಶೇ.30ರಷ್ಟು ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಿವೆ. ಕೋವಿಡ್-19 ಸಾಂಕ್ರಾಮಿಕದಿಂದ ತತ್ತರಿಸಿರುವ ಬಡಜನರಿಗೆ ಈ ಯೋಜನೆ ಪ್ರಯೋಜನಕಾರಿಯಾಗಲಿದ್ದು, ಬಾಕಿ ಇರುವ ಎಲ್ಲ ಅರ್ಜಿಗಳನ್ನು ಬ್ಯಾಂಕುಗಳು ಅತಿ ಶೀಘ್ರವಾಗಿ ಮಂಜೂರಾತಿ ನೀಡಿ ವಿಲೇವಾರಿ ಮಾಡಬೇಕೆಂದು ಸೂಚಿಸಿದರು