News

ಬ್ಯಾಡಗಿ ಮೆಣಸಿನಕಾಯಿ ನಂತರ ಈಗ ವೀಳ್ಯದೆಲೆಗೆ ಬಂಪರ್ ಬೆಲೆ

26 December, 2020 9:01 AM IST By:
Betel

ಕೊರೋನಾ ಸಂಕಷ್ಟದಿಂದಾಗಿ ಸಂಕಷ್ಟದಲ್ಲಿರುವ ರೈತರು ಚೇತರಿಸಿಕೊಳ್ಳಲು ಇತ್ತೀಚೆಗೆ ಅಡಿಕೆಬೆಲೆ ದಾಖಲೆ ಮಟ್ಟಕ್ಕೆ ಮಾರಾಟವಾಗಿದ್ದು ತಮಗೆ ಗೊತ್ತಿದ್ದ ಸಂಗತಿ. ಕಳೆದೆರಡು ದಿನಗಳ ಹಿಂದೆ ಬ್ಯಾಡಗಿ ಮೆಣಸಿಕಾಯಿಗೂ ಬಂಗಾರದ ಬೆಲೆ ಬಂದಿತ್ತು. ಈಗ ವೀಳ್ಯದೆಲೆಗೆ ಬಂಪರ್ ಬೆಲೆ ಬಂದಿದೆ.

ಹೌದು, ತುಮಕೂರು ಜಿಲ್ಲೆಯ ತೋವಿನಕೆರೆ ಮಾರುಕಟ್ಟೆಯಲ್ಲಿ ಶುಕ್ರವಾರ ಒಂದು ಕಟ್ಟು (100 ಎಲೆಗಳು) ದರ  80ಕ್ಕೆ ತಲುಪಿತ್ತು. ಕೊರೊನಾ ಆರಂಭವಾದಾಗಿನಿಂದಲೂ ಖರೀದಿಸುವವರಿಲ್ಲದೆ ರೈತರು ನಷ್ಟ ಅನುಭವಿಸಿದ್ದರು. ಈ ವರ್ಷ ಬೆಳೆಗಾರರಿಗೆ ಸಿಕ್ಕ ಅತಿಹೆಚ್ಚಿನ ಬೆಲೆ ಇದಾಗಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ವೀಳ್ಯೆದೆಲೆ ಇಳುವರಿ ಕುಸಿಯುತ್ತದೆ ಎಂದು ಹೇಳಲಾಗುತ್ತದೆ. ‘ಈಗ ಚಳಿ ವಿಪರೀತ ಹೆಚ್ಚಾಗಿದ್ದು, ಕುಡಿಗಳನ್ನು ನೆಲಕ್ಕೆ ಹರಡುವುದರಿಂದ ವೀಳ್ಯದೆಲೆ ಇಳುವರಿ ಕುಸಿಯುತ್ತದೆ. ಈ ಸಮಯದಲ್ಲಿ ಬೆಲೆ ಹೆಚ್ಚಾಗುವುದು ಸರ್ವೇ ಸಾಮಾನ್ಯ’ ಎನ್ನುತ್ತಾರೆ ಬೆಳೆಗಾರರು.

ಗ್ರಾಮದ ಸಂತೆಯಲ್ಲಿ ವೀಳ್ಯದೆಲೆಯನ್ನು ಮಧ್ಯವರ್ತಿಗಳು ಇಲ್ಲದೇ ರೈತರೇ ನೇರವಾಗಿ ಖರೀದಿದಾರರು ಹಾಗೂ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ತುಮಕೂರು, ಶಿರಾ, ಗುಬ್ಬಿ, ಮಧುಗಿರಿ ಸೇರಿದಂತೆ ವಿವಿಧ ಕಡೆಯ ಖರೀದಿದಾರರು ಬರುತ್ತಾರೆ. ಮಾರುಕಟ್ಟೆಗೆ ವೀಳ್ಯದೆಲೆ ಕಟ್ಟುಗಳು ಕಡಿಮೆ ಪ್ರಮಾಣದಲ್ಲಿ ಬಂದಿತ್ತು. ಕೆಲವು ಸ್ಥಳೀಯರು ಬೆಳಿಗ್ಗೆಯೇ ಖರೀದಿದಾರರು ಬರುವ ಮೊದಲೇ ಬೆಳೆಗಾರರಿಂದ ಖರೀದಿ ಮಾಡಿ ಸ್ವಲ್ಪ ಸಮಯದ ನಂತರ ಹೆಚ್ಚಿನ ಬೆಲೆಗೆ ಮಾರಾಟ ಕೂಡ ಮಾಡುತ್ತಾರೆ.

ಏನೇ ಇರಲಿ ರೈತರಿಗೆ ಉತ್ತಮ ಬೆಲೆ ಸಿಕ್ಕರೆ ಸಾಕು. ಬಿಸಿಲು, ಚಳಿ ಮಳೆಯೆನ್ನದೆ ಹಗಲು ರಾತ್ರಿ ದುಡಿಯುತ್ತಾರೆ. ಮಾರುಕಟ್ಟೆಯಲ್ಲಿ ಸರಿಯಾಗಿ ಬೆಲೆ ಸಿಗದಿದ್ದರೆ ಶ್ರಮವೆಲ್ಲೆ ಹೊಳೆಯನ್ನು ಹುಣಸಿನಹಣ್ಣು ತೊಳೆದಂತಾಗುತ್ತದೆ.