ಕೇಂದ್ರ ಸರ್ಕಾರವು 2021-21ನೇ ಬಜೆಟ್ನಲ್ಲಿ ಹಳೆಯ ವಾಹನಗಳ ವಿಲೇವಾರಿಗೆ ಹೊಸ ನೀತಿ ಘೋಷಿಸಿದೆ.ಆರೋಗ್ಯ ಸುರಕ್ಷತೆಯಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಹಳೆಯ ಹಾಗೂ ಮಾಲಿನ್ಯಕಾರಕ ವಾಹನಗಳನ್ನು ರದ್ದುಗೊಳಿಸುವ ಮಹತ್ವದ ಘೋಷಣೆ ಮಾಡಿದೆ.
ಹಳೆಯ ವಾಹನಗಳ ಸ್ವಯಂಪ್ರೇರಿತ ‘ಸ್ಕ್ರ್ಯಾಪಿಂಗ್ ಪಾಲಿಸಿ (ಹಳೆಯ ವಾಹನಗಳನ್ನು ಗುಜರಿಗೆ ನೀಡಲು ನೀತಿ)’ ಘೋಷಿಸಲಾಗಿದೆ. ಇದರನ್ವಯ ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ಬಳಿಕ ಹಾಗೂ ವಾಣಿಜ್ಯ ವಾಹನಗಳಿಗೆ 15 ವರ್ಷಗಳ ಬಳಿಕ ಕ್ಷಮತಾ ಪರೀಕ್ಷೆ ನಡೆಸಲಾಗುತ್ತದೆ.
ಪರಿಸರಕ್ಕೂ, ಆರೋಗ್ಯದ ನಡುವೆ ಅವಿನಾವಭಾವ ಸಂಬಂಧವಿದೆ. ಪರಿಸರ ಮಾಲಿನ್ಯ ಹೆಚ್ಚಾದರೆ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಹಾಗೂ ಮಾಲಿನ್ಯ ಕಡಿಮೆ ಮಾಡುವ, ತೈಲ ಆಮದು ಹೊರೆ ತಗ್ಗಿಸುವ ನಿಟ್ಟಿನಲ್ಲಿ ಪರಿಸರಸ್ನೇಹಿ ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ವಾಹನ ಗುಜರಿ ನೀತಿಯಿಂದಾಗಿ 10 ಸಾವಿರ ಕೋಟಿಗಳಷ್ಟು ಹೊಸ ಹೂಡಿಕೆ ಆಗಲಿದ್ದು, 50 ಸಾವಿರದಷ್ಟು ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹಳೆಯ ವಾಹನಗಳು ಗುಜರಿಗೆ ಹೋದರೆ ಹೊಸ ವಾಹನಗಳ ಖರೀದಿಯೂ ಹೆಚ್ಚಾಗುತ್ತದೆ. ಇಂಧನವೂ ಉಳಿತಾಯವಾಗುತ್ತದೆ.
20 ವರ್ಷಕ್ಕಿಂತ ಹಳೆಯ 51 ಲಕ್ಷ ಲಘು ಮೋಟಾರು ವಾಹನಗಳು (ಎಲ್‌ಎಂವಿ), 15 ವರ್ಷಕ್ಕಿಂತ ಹಳೆಯ 34 ಲಕ್ಷ ಎಲ್‌ಎಂವಿಗಳು ಹಾಗೂ 15 ವರ್ಷಕ್ಕಿಂತ ಹೆಚ್ಚಿನ 17 ಲಕ್ಷ ಮಧ್ಯಮ ಮತ್ತು ಭಾರಿ ಗಾತ್ರದ ಮೋಟಾರು ವಾಹನಗಳು ಹಾಗೂ ಫಿಟ್ನೆಸ್ ಪ್ರಮಾಣಪತ್ರ ಇಲ್ಲದೇ ಇರುವ ವಾಹನಗಳು ಈ ಹೊಸ ನೀತಿಯಲ್ಲಿ ಒಳಗೊಳ್ಳುವ ಅಂದಾಜು ಮಾಡಲಾಗಿದೆ