ರೈತರ ಮಕ್ಕಳಿಗಾಗಿಯೇ ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ರದ್ದುಪಡಿಸಿದ್ದರಿಂದ ಈ ವರ್ಷ ರೈತರ ಮಕ್ಕಳಿಗೆ ಅನ್ಯಾಯವಾಗಿದೆ. ಸಿಇಟಿ ಫತಿಲಾಂಶ ಪ್ರಕಟಿಸುವುದಕ್ಕಿಂತ ಮುಂಚೆ ಬಿಎಸ್ಸಿ ಕೃಷಿ, ಪಶು ಸಂಗೋಪನಾ ಹಾಗೂ ತೋಟಗಾರಿಕೆ ಪದವಿಗಳ ಪ್ರವೇಶಾತಿಯಲ್ಲಿ ಶೇ.25ರಷ್ಟು ಸಿಇಟಿ ಅಂಕ, ಶೇ.25ರಷ್ಟು ಪಿಯುಸಿಯಲ್ಲಿನ ವಿಷಯಗಳ ಥೇರಿ ಅಂಕಗಳನ್ನು ಪರಿಗಣಿಸಿದರೆ ಇನ್ನುಳಿದ ಶೇ.50ರಷ್ಟು ಅಂಕಗಳನ್ನು ರೈತರ ಮಕ್ಕಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ ಅಂಕಗಳನ್ನು ನಿಗದಿ ಮಾಡಲಾಗುತ್ತಿತ್ತು. ಇವೆಲ್ಲವುಗಳನ್ನು ಕ್ರೋಡೀಕರಿಸಿ ಪ್ರವೇಶಾತಿಯ ರ್‍ಯಾಂಕ್ ಪ್ರಕಟಿಸಲಾಗುತ್ತಿತ್ತು.
ಆದರೆ ಈ ವರ್ಷ ಕೊರೋನಾ ಹೆಸರಿನ ಮೇಲೆ ಬಿಎಸ್ಸಿ ಕೃಷಿ, ಪಶು ಸಂಗೋಪನೆ ಹಾಗೂ ತೋಟಗಾರಿಕೆ ಸೇರಿ ಇತರ ಕೋರ್ಸ್‌ಗಳಲ್ಲಿ ರೈತರ ಮಕ್ಕಳಿಗೆ ಶೇ.40ರಷ್ಟು ಸೀಟು ಮೀಸಲಾತಿಗೆ ನಡೆಯಬೇಕಿದ್ದ ಪರೀಕ್ಷೆ ರದ್ದುಗೊಂಡಿರುವುದು ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮೂಡಿಸಿದೆ. ಪ್ರಾಯೋಗಿಕ ಅಂಕಗಳ ಆಧಾರದ ಮೇಲೆ ನೇಮಕಗೊಳ್ಳಲು ಬಯಸುವ ಮಕ್ಕಳಿಗೆ ಅನ್ಯಾಯವಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿರುವ ರೈತರ ಮಕ್ಕಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಕೃಷಿ ಉಪಕರಣಗಳು, ರಸಗೊಬ್ಬರ ಸೇರಿ ಕೃಷಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಅರಳು ಹುರಿದಂತೆ ಸರಳವಾಗಿ ಹೇಳುತ್ತಾರೆ. ಆದರೆ ನಗರದಲ್ಲಿದ್ದುಕೊಂಡು ಓದಿದ ಮಕ್ಕಳಿಗೆ ಕಷ್ಟವಾಗುತ್ತದೆ. ರೈತರ ಮಕ್ಕಳಿಗೆ ಅನುಕೂಲವಾಗಲೆಂದೇ ನಿಯಮ ಹಾಗೂ ಕಾನೂನು ಜಾರಿಗೆ ತರಲಾಗಿತ್ತು. ಇದರಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿರುವ ನಿಜವಾದ ರೈತರ ಮಕ್ಕಳಿಗೆ ಪ್ರಾಯೋಗಿಕ ಪರೀಕ್ಷೆ ಸುಲಭವಾಗಿತ್ತು. ಸಿಇಟಿಯಲ್ಲಿ ಹೆಚ್ಚು ಅಂಕಪಡೆಯಲು ಸಹಯವಾಗುತ್ತಿತ್ತಲ್ಲದೆ ಆಯ್ಕೆಯಾಗುತ್ತಿದ್ದರು. ಆದರೆ ಈಗ ಪ್ರಾಯೋಗಿಕ ಪರೀಕ್ಷೆಯನ್ನೇ ರದ್ದುಪಡಿಸಿದ್ದರಿಂದ ರೈತರ ಮಕ್ಕಳಲ್ಲಿ ನಿರಾಶೆಯನ್ನುಂಟು ಮಾಡಲಾಗಿದೆ.
ದಾಖಲಾತಿ ಅಪಲೋಡ್ ಮಾಡಲು ಇಂದೇ ಕೊನೆಯ ದಿನ: ಬಿಎಸ್ಸಿ ಕೃಷಿ, ಪಶು ಸಂಗೋಪನೆ ಹಾಗೂ ತೋಟಗಾರಿಕೆ ಪದವಿಯಲ್ಲಿ ರೈತರ ಕೋಟಾದಡಿ ಪ್ರವೇಶಾತಿ ಪಡೆಯುವ ಅರ್ಹ ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳನ್ನು ಆನ್ ಲೈನ್ ಮುಖಾಂತರ ಅಪ್‌ಲೋಡ್ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ ದಾಖಲಾತಿಗಳನ್ನು ಅಪಲೋಡ್ ಮಾಡಲು ಆ.24 ಕೊನೆ ದಿನವಾಗಿದೆ. ರೈತರ ಕೋಟಾದಡಿ ಪ್ರವೇಶ ಬಯಸುವ ಅಂದಾಜು 90 ಸಾವಿರ ವಿದ್ಯಾರ್ಥಿಗಳು ವ್ಯವಸಾಯ ಪ್ರಮಾಣ ಪತ್ರ, ಕೃಷಿ ಆದಾಯ ಪ್ರಮಾಣ ಪತ್ರ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ರೈತ ಮಕ್ಕಳಿಗೆ ಇರುವ ಸುಮಾರು 3 ಸಾವಿರ ಸೀಟುಗಳು ಬೇರೆಯವರ ಪಾಲಾಗುವುದೇ ಎಂಬ ಆತಂಕ ಕಾಡಲಾರಂಭಿಸಿದೆ.