News

ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಇನ್ನಿಲ್ಲ

30 April, 2020 7:38 PM IST By:

ಉಸಿರಾಟದ ತೊಂದರೆಯಿಂದ ಬಳಲುತಿದ್ದ ಬಾಲಿವುಡ್‍ನ ಹಿರಿಯ ನಟ ರಣಬೀರ್ ಕಪೂರ್ ತಂದೆ ನಟ ರಿಷಿ ಕಪೂರ್ (67) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಹಲವು ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಅನಾರೋಗ್ಯದಿಂದಾಗಿ ಅವರನ್ನು ಮುಂಬೈನ ಎಚ್‍ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದಿದ್ದಾರೆ.

ನಿನ್ನೆಯಷ್ಟೇ (ಬುಧವಾರ) ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ದುಃಖ ಮಾಸುವ ಮೊದಲೇ ಭಾರತೀಯ ಚಿತ್ರರಂಗದ ಮೊತ್ತೊಬ್ಬ ದಿಗ್ಗಜ ನಟ ರಿಷಿ ಕಪೂರ್ ಗುರುವಾರ ನಮ್ಮನಗಲಿದ್ದಾರೆ. 2018 ಕ್ಯಾನ್ಸರ್ ಕಾಣಿಸಿಕೊಂಡ ನಂತರ ರಿಷಿ ಕಪೂರ್ ಅಮೆರಿಕಾದ ನ್ಯೂಯಾರ್ಕ್‍ಗೆ  ತೆರಳಿ ಒಂದು ವರ್ಷ ಚಿಕಿತ್ಸೆ ಪಡೆದು ಕಳೆದ ಸೆಪ್ಟೆಂಬರ್‍ನಲ್ಲಿ ಭಾರತಕ್ಕೆ ವಾಪಾಸಾಗಿದ್ದರು. ಫೆಬ್ರವರಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಎರಡು ಭಾರೀ  ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಜೊತೆ ಸಿನಿಮಾ ಮಾಡುವುದಾಗಿ ಅವರು ಘೋಷಣೆ ಕೂಡ ಮಾಡಿದ್ದರು. ರಿಷಿ ಕಪೂರ್ ನಿಧನಕ್ಕೆ  ಚಿತ್ರರಂಗದ ಗಣ್ಯರು ಸೇರಿದಂತೆ ಹಲವರು  ಸಂತಾಪ ಸೂಚಿಸಿದ್ದಾರೆ.

32 ಹಿಟ್ ಸಿನಿಮಾ ನೀಡಿದ್ದ ರಿಷಿ, ಪತ್ನಿ ಜೊತೆಗೆ 12 ಸಿನಿಮಾಗಳಲ್ಲಿ ನಟಿಸಿದ್ದರು. ತಂದೆ ರಾಜ್ ಕಪೂರ್ ಅವರ 'ಮೇರಾ ನಾಮ್ ಜೋಕರ್' ಚಿತ್ರದಲ್ಲಿನ ಬಾಲನಟನೆಗಾಗಿ ರಿಷಿ ಕಪೂರ್ 1970ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಡಿಂಪಲ್ ಕಪಾಡಿಯಾ ಜೊತೆಗೆ ಲೀಡ್ ಆಗಿ 'ಬಾಬಿ' ಚಿತ್ರದಲ್ಲಿ ಕಾಣಿಸಿಕೊಂಡ ರಿಷಿಗೆ 1974ರಲ್ಲಿ ಉತ್ತಮ ನಟ ವಿಭಾಗದಲ್ಲಿ ಫಿಲ್ಮ್‍ಫೇರ್ ಅವಾರ್ಡ್ ಸಿಕ್ಕಿತ್ತು. 1973ರಿಂದ 2000ರವರೆಗೆ 92 ಸಿನಿಮಾಗಳಲ್ಲಿ ಲೀಡ್ ಆಗಿ ಕಾಣಿಸಿಕೊಂಡ ರಿಷಿ ಕಪೂರ್ ಅವುಗಳಲ್ಲಿ 32 ಹಿಟ್ ಸಿನಿಮಾ ನೀಡಿದ್ದರು. 'ದೊ ದೋನಿ ಚಾರ್', 'ಕಪೂರ್ ಸನ್ಸ್' ಸಿನಿಮಾಗಳಿಗೆ ಫಿಲ್ಮ್‍ಫೇರ್ ಅವಾರ್ಡ್ ಪಡೆದಿದ್ದರು. ಇವರ ಪತ್ನಿ ನೀತು ಸಿಂಗ್ ಜೊತೆಗೆ 12 ಸಿನಿಮಾಗಳಲ್ಲಿ ನಟಿಸಿದ್ದರು. ರಿಷಿ ಕಪೂರ್ ತಂದೆ ರಾಜ್ ಕಪೂರ್, ಅಜ್ಜ ಪೃಥ್ವಿರಾಜ್ ಕಪೂರ್ ಕೂಡ ನಟರೇ. ಪಂಜಾಬಿ ಕುಟುಂಬದ ಇವರದ್ದು ಪಕ್ಕಾ ಕಲಾವಿದರ ಕುಟುಂಬ.

ಖಳನಟನಾಗಿಯೂ ನಟನೆ: 2000 ನಂತರದ ಸಿನೆಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಪೂರ್ 2012 ರಲ್ಲಿ ಹೃತಿಕ್ ರೋಷನ್ ನಟಿಸಿದ್ದ ಅಗ್ನಿಪಥ್ ಸಿನೆಮಾದಲ್ಲಿ ಖಳನಟನಾಗಿ ಮಿಂಚಿದ್ದರು. ಇದು ರಿಷಿ ಕಪೂರ್ ತಮ್ಮ ವೃತ್ತಿ ಬದುಕಿನಲ್ಲಿ ಖಳನಟನಾಗಿ ಕಾಣಿಸಿಕೊಂಡ ಮೊದಲ ಸಿನೆಮಾ ಆಗಿತ್ತು. ಡೋಂಟ್ ಸ್ಟಾಪ್ ಡ್ರೀಮಿಂಗ್, ಸಂಬಾರ್ ಸಾಲ್ಸಾನಂತಹ ಹಾಲಿವುಡ್ ಸಿನೆಮಾಗಳಲ್ಲಿಯೂ ಅವರು ನಟಿಸಿದ್ದರು. ರಷಿಕಪೂರ್ ನಟಿಸಿದ ಕೊನೆಯ ಸಿನೆಮಾ 102 ನಾಟ್‍ ಔಟ್. 

ಕಂಬನಿ ಮಿಡಿದ ದಿಗ್ಗಜರು:

ಹಿರಿಯ ಬಾಲಿವುಡ್ ನಟ ರಿಷಿ ಕಪೂರ್ ನಿಧನಕ್ಕೆ ಚಿತ್ರಜಗತ್ತಿನ ಸ್ಟಾರಗಳು, ಹಿರಿಯ ನಟರು, ದೇಶದ ಪ್ರಮುಖ ನಾಯಕರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನಿಧನಕ್ಕೆ ಶೋಕ ಸಂದೇಶ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಿಷಿ ಕಪೂರ್ ಅವರದು ಬಹುಮುಖಿ ಪ್ರತಿಭೆ. ಜೀವಂತಿಕೆ, ಲವಲವಿಕೆಯ ಬದುಕು ಅವರದ್ದಾಗಿತ್ತು. ಅವರೊಂದಿಗಿನ ಸಂವಾದವನ್ನು ನಾನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ. ಅವರಿಗೆ ಭಾರತದ ಪ್ರಗತಿ ಮತ್ತು ಸಿನಿಮಾಗಳ ಬಗ್ಗೆ ಅತೀವ ಆಸಕ್ತಿಯಿತ್ತು ಎಂದು ಹೇಳಿದ್ದಾರೆ.