ಬಾಲಿವುಡ್'ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ (71) ಅವರು ಕಾರ್ಡಿಯಾಕ್ ಅರೆಸ್ಟ್ನಿಂದಾಗಿ ಶುಕ್ರವಾ ನಸುಕಿನ ವೇಳೆ ವಿಧಿವಿಶರಾಗಿದ್ದಾರೆ.
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಅವರನ್ನು ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ಜೂನ್ 20 ರಂದು ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಬೆಳಕಿನ ಜಾವ 2 ಗಂಟೆ ಸುಮಾರಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಸರೋಜ್ ಖಾನ್ ಅವರನ್ನು ಕೊರೋನಾ ಪರೀಕ್ಷೆಗೆ ಕೂಡ ಒಳಪಡಿಸಲಾಗಿತ್ತು. ವೈದ್ಯಕೀಯ ವರದಿ ನೆಗೆಟಿವ್ ಬಂದಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಸರೋಜ್ ಖಾನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಮೂರು ವರ್ಷದ ಬಾಲಕಿಯಾಗಿದ್ದಾಗ ಹಿನ್ನೆಲೆ ನೃತ್ಯಪಟುವಾಗಿ ವೃತ್ತಿ ಬದುಕು ಆರಂಭಿಸಿದ ಸರೋಜ 1974ರಲ್ಲಿ ಬಿಡುಗಡೆಯಾಗಿದ್ದ ಹಿಂದಿಯ ನಾಮ್ ಸಿನಿಮಾದ ಮೂಲಕ ನೃತ್ಯ ಸಂಯೋಜಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸುಮಾರು 4 ದಶಕಗಳ ಕಾಲ ಚಿತ್ರರಂಗದಲ್ಲಿ ಸರೋಜ್ ಖಾನ್ ಅವರು ಕೆಲಸ ಮಾಡಿದ್ದಾರೆ. ಸುಮಾರು 2 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
1974ರಲ್ಲಿ ಗೀತಾ ಮೇರಾ ನಾಮ್ ಚಿತ್ರದ ಮೂಲಕ ಸ್ವತಂತ್ರ ನೃತ್ಯ ಸಂಯೋಜಕಿಯಾಗಿ ವೃತ್ತಿ ಬದುಕಿನ ಪ್ರಮುಖ ಮೈಲಿಗಲ್ಲು ಸ್ಥಾಪಿಸಿದರು. 1987ರ ಮಿಸ್ಟರ್ ಇಂಡಿಯಾ ಚಿತ್ರದ ಹವಾ ಹವಾಯಿ, 1992ರ ಬೇಟಾ ಚಿತ್ರದ ಧಕ್ ಧಕ್ ಕರನೇ ಲಗಾ ಹಾಡಿನ ನೃತ್ಯಗಳು ಇಂದಿಗೂ ಸ್ಮರಣೀಯ. ಕರಣ್ ಜೋಹರ್ 2019ರಲ್ಲಿ ನಿರ್ಮಿಸಿ ಕಲಂಕ್ ಚಿತ್ರದ ತಬಾಹ್ ಹೋ ಗಯೇ ಎಂಬ ಹಾಡಿಗೆ ಮಾಧುರಿ ದೀಕ್ಷಿತ್ ಅವರ ನೃತ್ಯಕ್ಕೆ ಕೊನೆಯದಾಗಿ ಕೊರಿಯೊಗ್ರಫಿ ಮಾಡಿದ್ದರು
ಏಕ್ ದೋ ತೀನ್, ಚೋಲಿ ಕೆ ಪೀಚೆ ಕ್ಯಾಹೆ, ಡೋಲಾ ರೆ ಡೋಲಾ ಸೇರಿದಂತೆ ಇನ್ನೂ ಅನೇತ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನು ಸರೋಜ್ ಖಾನ್ ಅವರಿಗೆ 3 ಬಾರಿ ರಾಷ್ಟ್ರ ಪ್ರಶಸ್ತಿಗಳೂ ಕೂಡ ಲಭಿಸಿವೆ.