News

ದುಬೈನಲ್ಲಿ ಸಿಗುತ್ತೆ ಜಗತ್ತಿನ ದುಬಾರಿ, ಬಂಗಾರದ ಐಸ್‌ಕ್ರೀಂ; ಅದರ ಬೆಲೆ 60,000 ರೂಪಾಯಿ!

26 July, 2021 9:38 PM IST By:
ಸ್ಕೂಪಿ ಕೆಫೆಯಲ್ಲಿ ಬ್ಲಾಕ್ ಡೈಮಂಡ್ ಐಸ್‌ಕ್ರೀಮ್ ಸೇವಿಸುತ್ತಿರುವ ಬಾಲಿವುಡ್ ನಟಿ ಶೆನಾಜ್ ಖಜಾನೆವಾಲಾ.

ಹೆಣ್ಮಕ್ಕಳು-ಬಂಗಾರ-ಮತ್ತು ಐಸ್‌ಕ್ರೀಂ! ಈ ಮೂರನ್ನೂ ಬೇರೆ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಐಸ್‌ಕ್ರೀಂ ಮತ್ತು ಬಂಗಾರ ಮಹಿಳೆಯರೊಂದಿಗೆ ಅಷ್ಟು ಗಾಢವಾಗಿ ಬೆಸೆದುಕೊಂಡಿವೆ. ನೀವು ನಿಮ್ಮ ಮಡದಿಯನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋದರೆ ಒಂದೋ ಬಂಗಾರ ಕೊಡಿಸಬೇಕು; ಹಣ ಇಲ್ಲ, ಮುಂದಿನ ತಿಂಗಳು ಎಂದು ನೀವೇನಾದರೂ ನೆಪ ಹೇಳಿದರೆ ಕಡೇ ಪಕ್ಷ ಒಂದು ಐಸ್‌ಕ್ರೀಂ ಆದರೂ ಕೊಡಿಸಲೇಬೇಕು. ಈ ಐಸ್‌ಕ್ರೀಮಿನಿಂದ ಎರಡು ಉಪಯೋಗಗಳಿವೆ. ಮೊದಲನೆಯದು ಇದೆಂದರೆ ಹೆಣ್ಮಕ್ಕಳಿಗೆ ಬಲು ಇಷ್ಟ. ಇದನ್ನು ತಿನಿಸಿದರೆ ಅವರಿಗೆ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುತ್ತದೆ. ಎರಡನೆಯದು, ನೀವು ಬಂಗಾರ ಕೊಡಿಸುವುದಿಲ್ಲ ಎಂದಾಗ ನಿಮ್ಮಾಕೆ ಮಾಡಿಕೊಳ್ಳುವ ಕೆಂಡದಂತಹ ಕೋಪವನ್ನು ಕ್ಷಣಾರ್ಧದಲ್ಲಿ ತಣ್ಣಗೆ ಮಾಡುವ ಅಘೋರ ಶಕ್ತಿ ಈ ಐಸ್‌ಕ್ರೀಮಿನಲ್ಲಿದೆ!

ಹೌದು, ಈ ಜಿಟಿ ಜಿಟಿ ಮಳೆ ಹಿಡಿದುಕೊಂಡಿರುವ ದಿನಗಳಲ್ಲಿ ಶೀತ ತಂದೊಡ್ಡುವ ಐಸ್‌ಕ್ರೀಮು ಮತ್ತು ದುಬಾರಿ ಬಂಗಾರದ ಜಪ ಏಕೆ ಅಂತೀರಾ? ಈ ಎರಡನ್ನೂ ಪ್ರಸ್ತಾಪಿಸಲು ಒಂದು ಕಾರಣವಿದೆ. ಅದೇನೆಂದು ಹೇಳಿದರೆ ನೀವು ಬೆಚ್ಚಿ ಬೀಳುವುದು ಗ್ಯಾರಂಟಿ. ಇದುವರೆಗೆ ನಾವು ಹೇಳಿದ್ದು, ಐಸ್‌ಕ್ರೀಮ್ ಅಥವಾ ಬಂಗಾರ ಎರಡರ ಪೈಕಿ ಒಂದನ್ನು ಕೊಡಿಸಿದರೆ ಹೆಂಗಸರು ಶಾಂತರಾಗುತ್ತಾರೆ ಎಂದು. ಆದರೆ, ಇವೆರಡನ್ನೂ ಮಿಕ್ಸ್ ಮಾಡಿ ಅವರ ಮುಂದಿಟ್ಟರೆ!!

ಹೆಚ್ಚು ಕನ್‌ಫ್ಯೂಸ್ ಆಗಬೇಡಿ. ವಿಷಯ ಏನೆಂದು ಈಗ ಗೊತ್ತಾಗಲಿದೆ. ಅದಕ್ಕೂ ಮುನ್ನ ಮುಖ್ಯವಾಗಿ ಗಂಡ್ಮಕ್ಕಳು ಗುಂಡಿಗೆ ಗಟ್ಟಿ ಮಾಡಿಕೊಳ್ಳಿ. ಏಕೆಂದರೆ ಈಗ ಹೇಳುವ ವಿಷಯ ಕೇಳಿ ಹೆಚ್ಚು ನಿರಾಸೆಯಾಗುವುದು ನಿಮಗೇ! ದುಬೈನಲ್ಲಿ ಒಂದು ಐಸ್ ಕ್ರೀಂ ತುಂಬಾ ಸದ್ದು ಮಾಡುತ್ತಿದೆ. ಅದು ಜಗತ್ತಿನ ಅತ್ಯಂತ ದುಬಾರಿ ಐಸ್‌ಕ್ರೀಮ್ ಎಂಬ ಖ್ಯಾತಿಗೂ ಪಆತ್ರವಾಗಿದೆ. ಅದರ ಹೆಸರು ‘ಬ್ಲಾಕ್ ಡೈಮಂಡ್’. ಅದರ ವಿಶೇಷತೆ ಏನುಗೊತ್ತಾ? ಅದು ಎಲ್ಲ ಐಸ್‌ಕ್ರೀಮ್‌ಗಳಂತೆ ಸಾಮಾನ್ಯವಾದ ಐಸಲ್ಲ. ಇದರಲ್ಲಿ ವಿಶೇಷವಾದ ಮಿಶ್ರಣಗಳಿವೆ. ಹೀಗಾಗಿ ಈ ಐಸ್‌ಕ್ರೀಮಿನ ಒಂದು ಸ್ಕೂಪ್ ಬೆಲೆ ಬರೋಬ್ಬರಿ 60,000 ರೂಪಾಯಿಗಳು!

ಸಾಮಾನ್ಯವಾಗಿ ನಾವೆಲ್ಲಾ ಹೊರಗೆ ಹೋಗಿ ಐಸ್‌ಕ್ರೀಂ ತಿನ್ನುವಾಗ ಹೆಚ್ಚೆಂದರೆ 100, 200 ಅಥವಾ 500 ರೂ. ಕೊಟ್ಟು ಒಂದು ಸ್ಕೂಪ್ ಐಸ್‌ಕ್ರೀಮ್ ತಿಂದಿರಬಹುದು. ಬೆಂಗಳೂರಿನAತಹ ಮಹಾನಗರಗಳಲ್ಲಿರುವ ದೊಡ್ಡ ದೊಡ್ಡ ಐಸ್‌ಕ್ರೀಂ ಅಂಗಡಿಗಳಲ್ಲಿ 5,000 ರೂ. ಬೆಲೆಯ ಐಸ್‌ಕ್ರೀಮ್‌ಗಳೂ ಸಿಗುತ್ತವೆ. ಆದರೆ ಒಂದು ಸ್ಕೂಪ್ ಐಸ್‌ಕ್ರೀಮಿಗೆ 60,000 ರೂ. ಎಂದರೆ ಏನರ್ಥ. ಈ ಬೆಲೆ ಕೇಳಿದ ಕೂಡಲೆ ಕೆಲವರು ಹುಬ್ಬೇರಿಸಿ, ಅಂಥಾದ್ದೇನಿದೆ ಈ ಐಸ್‌ಕ್ರೀಮಿನಲ್ಲಿ?' ಎಂದು ಕೇಳಬಹುದು. ಈ ಐಸ್‌ಕ್ರೀಮಿನಲ್ಲಿ ಬಂಗಾರವಿದೆ!

ಬ್ಲಾಕ್ ಡೈಮಂಡ್ ಐಸ್‌ಕ್ರೀಮ್

ಹೌದು, ಬ್ಲಾಕ್ ಡೈಮಂಡ್ ಐಸ್‌ಕ್ರೀಮಿನಲ್ಲಿ ಬಂಗಾರ ಮಿಶ್ರಣ ಮಾಡಲಾಗಿದೆ. ನಾವೀಗ ಹೇಳುತ್ತಿರುವ ಐಸ್‌ಕ್ರೀಮ್ ಅನ್ನು, ಮಾನವರು ಸೇವಿಸಲು ಯೋಗ್ಯವಾಗಿರುವ 23 ಕ್ಯಾರಟ್ ಗುಣಮಟ್ಟದ ಬಂಗಾರವನ್ನು ಬೆರೆಸಿ ತಯಾರಿಸಲಾಗಿದೆ. ಅದಕ್ಕೇ ಅದು ಇಷ್ಟೊಂದು ದುಬಾರಿ. ಹಾಗೇ ಇಂತಹ ದುಬಾರಿ ಐಸ್‌ಕ್ರೀಮ್ ತಿನ್ನಲಿಕ್ಕೆ ಸಿಗುವುದು ದುಬೈನಲ್ಲಿ ಮಾತ್ರ.

ಬ್ಲಾಕ್ ಡೈಮಂಡ್‌ನ ವಿಶೇಷತೆ ಏನು?

ಬ್ಲಾಕ್ ಡೈಮಂಡ್ ಐಸ್‌ಕ್ರೀಮ್ ವೆನ್ನಿಲ್ಲಾ ಫ್ಲೇವರ್‌ನಲ್ಲಿ ಲಭ್ಯವಿದೆ. ಆದರೆ ನಾವೆಲ್ಲರೂ ಯಾವಾಗಲೂ ಸೇವಿಸುವ ವೆನ್ನಿಲ್ಲಾ ಫ್ಲೇವರ್ ಇದಲ್ಲ. ಇದರಲ್ಲಿ 23 ಕ್ಯಾರಟ್ ಗುಣಮಟ್ಟದ, ಸೇವಿಸಲು ಯೋಗ್ಯವಾಗಿರುವ ಬಂಗಾರ ಬೆರೆತಿರುತ್ತದೆ. ಇದರೊಂದಿಗೆ ಕೆಂಪಗಿನ ಕೇಸರಿ ಎಳೆಗಳನ್ನು ಐಸ್‌ಕ್ರೀಮಿನ ಮೇಲೆ ಒಪ್ಪವಾಗಿ ಉದುರಿಸಿ, ಆಕರ್ಷಕವಾಗಿ ಅಲಂಕರಿಸಲಾಗಿರುತ್ತದೆ. ಚಮ್ಮಚೆಯಲ್ಲಿ ಐಸ್‌ಕ್ರೀಮ್ ಅನ್ನು ತೆಗೆದುಕೊಂಡು ಬಾಯಿಗೆ ಇರಿಸಿಕೊಂಡರೆ ವೆನಿಲ್ಲಾ ಫ್ಲೇವರ್‌ನಲ್ಲಿ ಬೆರೆತ ಬಂಗಾರದ ಗರಿಗರಿ ಕಣಗಳೊಂದಿಗೆ ಕೇಸರಿಯ ಕಣಗಳು ಬಾಯಿ ತುಂಬಿಕೊಳ್ಳುತ್ತವೆ. ದುಬೈನಲ್ಲಿ ಈ ಐಸ್‌ಕ್ರೀಮ್‌ನ ಸರಿಯಾದ ಹೆಸರು ‘ಡೈಮಂಡ್ ಆಫ್ ಗ್ಯಾಸ್ಟೊçÃನೊಮಿ’ ಎಂಬುದಾಗಿದೆ. ಆದರೆ ಜನಬಳಕೆಯಲ್ಲಿ ಅದು ‘ಬ್ಲಾಕ್ ಡೈಮಂಡ್’ ಎಂದು ಫೇಮಸ್ ಆಗಿದೆ. ಅಂದಹಾಗೆ ದುಬೈನಲ್ಲಿರುವ ಎಲ್ಲಾ ಐಸ್‌ಕ್ರೀಮ್ ಪಾರ್ಲರ್‌ಗಳಲ್ಲೂ ಬ್ಲಾಕ್ ಡೈಮಂಡ್ ಸಿಗುವುದಿಲ್ಲ ಬದಲಿಗೆ ‘ಸ್ಕೂಪಿ ಕೆಫೆ’ ಎಂಬ ಡೆಸರ್ಟ್ ಪಾರ್ಲಲರ್‌ನಲ್ಲಿ ಮಾತ್ರ ಈ ಬಂಗಾರದ ಐಸ್‌ಕ್ರೀಮ್ ಲಭ್ಯವಿದೆ.

ಐಶಾರಾಮಿತನದ ಸಂಕೇತ

ಎಲ್ಲರಿಗೂ ಗೊತ್ತಿರುವಂತೆ ದುಬೈ ಶೇಖ್‌ಗಳು ಐಶಾರಾಮಿತನಕ್ಕೆ ಹೆಸರಾಗಿರುವವರು. ಹೀಗಾಗಿ ಖಾಸ್ ಅವರಿಗಂತಲೇ ಇಂಥದೊAದು ಅದ್ಧೂರಿ, ಐಶಾರಾಮಿ ಐಸ್‌ಕ್ರೀಂ ಅನ್ನು ಸ್ಕೂಪಿ ಕೆಫೆ ತಯಾರಿಸಿದೆ. ಇನ್ನು ಬಂಗಾರದ ಕೋಟಿಂಗ್ ಮಾಡಿರುವ ಐಶಾರಾಮಿ ವಾಹನಗಳಲ್ಲಿ ಬಂದಿಳಿಯುವ ಸಿರಿವಂತ ಶೇಖ್‌ಗಳು ಮತ್ತು ಅವರ ಕುಟುಂಬದವರಿಗೆ ಮಾಮೂಲಿ ಬೌಲ್‌ನಲ್ಲಿ ಐಸ್‌ಕ್ರೀಮ್ ಹಾಕಿ ಕೊಟ್ಟರೆ ಚೆನ್ನಾಗಿರುವುದಿಲ್ಲ. ಹಾಗಾಗಿಯೇ ಅತ್ಯಾಕರ್ಷಕವಾಗಿರುವ, ಬಣ್ಣಬಣ್ಣದ ಚಿತ್ತಾರಗಳನ್ನು ಒಳಗೊಂಡ ದುಬಾರಿ ವರ್ಸೇಸ್ ಬಟ್ಟಲಿನಲ್ಲಿ ಬಂಗಾರದ ಐಸ್‌ಕ್ರೀಮನ್ನು ಹಾಕಿ, ಅದನ್ನು ಸೇವಿಸಲು ಬೆಳ್ಳಿಯ ಚಮಚವನ್ನು ನೀಡಲಾಗುತ್ತದೆ. ವಿಶೇಷ ಏನೆಂದರೆ, ನೀವು ಐಸ್ ತಿಂದಾದ ಬಳಿಕ ಬೌಲ್ ಮತ್ತು ಸ್ಪೂನ್ ಎರಡನ್ನೂ ಮನೆಗೆ ಕೊಂಡೊಯ್ಯಬಹುದು!

ಅಂದಹಾಗೆ, ಈ ಐಸ್‌ಕ್ರೀಮ್ ಬಗ್ಗೆ ಗೊತ್ತಾಗಿದ್ದು ಬಾಲಿವುಡ್ ನಟಿ ಹಾಗೂ ಟ್ರಾವೆಲ್ ಬ್ಲಾಗರ್ ಶೆನಾಜ್ ಖಜಾನೆವಾಲಾ ಅವರಿಂದ. ದುಬೈಗೆ ತೆರಳಿದ್ದ ಶೆನಾಜ್, ಅಲ್ಲಿನ ಪ್ರಖ್ಯಾತ ಸ್ಕೂಪಿ ಕೆಫೆಗೆ ಭೇಟಿ ನೀಡಿದ್ದರು. ಆಗ ಅಲ್ಲಿನ ಸುಪ್ರಸಿದ್ಧ ಹಾಗೂ ಜಗತ್ತಿನ ದುಬಾರಿ ಐಸ್‌ಕ್ರೀಮ್ ಸೇವಿಸಿದ ನಟಿ, ಆ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪ್ರಕಟಿಸಿದ್ದರು. ಶೆನಾಜ್ ಹೇಳುವಂತೆ ದುಬೈನಲ್ಲಿ ಬ್ಲಾಕ್ ಡೈಮಂಡ್ ಐಸ್‌ಕ್ರೀಮ್ ಬೆಲೆ 3000 ದೀರಮ್ ಅಂದರೆ 840 ಡಾಲರ್ ಅಥವಾ 60,000 ರೂಪಾಯಿ!

ಇಷ್ಟೆಲ್ಲಾ ಓದಿದ ನಂತರ ಮೂಡುವ ಒಂದು ಪ್ರಶ್ನೆ ಏನೆಂದರೆ, 60,000 ರೂಪಾಯಿ ಕೊಟ್ಟು ಐಸ್‌ಕ್ರೀಮ್ ತಿನ್ನುವುದು ಉತ್ತಮವೋ? ಅಥವಾ ಅದೇ ಹಣ ಕೊಟ್ಟು ಬಂಗಾರ ಖರೀದಿಸುವುದು ಒಳಿತೋ? ಬುದ್ಧಿವಂತರು ಹೇಳುವ ಪ್ರಕಾರ ಬಂಗಾರ ತಿನ್ನುವುದಕ್ಕಿಂತಲೂ ಅದೇ ಹಣವನ್ನು ಬಂಗಾರದ ಮೇಲೆ ಹೂಡಿಕೆ ಮಾಡುವುದು ನಿಜವಾದ ಜಾಣರ ಲಕ್ಷಣ!