News

ರಾಜ್ಯ ಸರ್ಕಾರಿ ನೌಕರರಿಗೆ ಶೇ 4 ರಷ್ಟು DA ಹೆಚ್ಚಿಸಿದ ಬಿಹಾರ ಸರ್ಕಾರ

25 November, 2023 11:34 AM IST By: Maltesh

ಬಿಹಾರ್‌ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಚಿವ ಸಂಪುಟ ಸಭೆ ನಡೆಯಿತು.

ಸಚಿವ ಸಂಪುಟ ಸಭೆಯಲ್ಲಿ 40 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಒಟ್ಟು ನಾಲ್ಕು ಪ್ರತಿಶತ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿದೆ. ಅಂದರೆ ಡಿಎ ಶೇ.42ರಿಂದ ಶೇ.46ಕ್ಕೆ ಏರಿಕೆಯಾಗಿದೆ.

ಬಿಹಾರ್‌ ಸರ್ಕಾರ ತನ್ನ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಿಗ್ ರಿಲೀಫ್ ನೀಡಿದೆ. ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕೆ ಸಚಿವ ಸಂಪುಟ ಕೂಡ ಒಪ್ಪಿಗೆ ನೀಡಿದೆ. ಇದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಶೇ.42ರ ಬದಲಾಗಿ ಶೇ.46 ತುಟ್ಟಿಭತ್ಯೆ ಸಿಗಲಿದೆ.

7ನೇ ವೇತನ ಆಯೋಗದ ಪರಿಷ್ಕೃತ ವೇತನ ಸಂರಚನೆಯಲ್ಲಿ ಸಂಬಳ/ಪಿಂಚಣಿ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರು/ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ 01.07.2023 ರಿಂದ ಜಾರಿಗೆ ಬರುವಂತೆ ಶೇ.42ರ ಬದಲಿಗೆ ಶೇ.46 ತುಟ್ಟಿಭತ್ಯೆ ನೀಡಲಾಗುವುದು ಎಂದು ಬಿಹಾರದ ಹಣಕಾಸು ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಡಿಸೆಂಬರ್‌ನಲ್ಲಿ ಬರುವ ಈ ತಿಂಗಳ ವೇತನದ ಜೊತೆ ಜೊತೆಗೆ ಇದೀಗ ಹೆಚ್ಚಿಸಲಾದ ಡಿಎ ನೀಡಲು ಬಿಹಾರ ಸರ್ಕಾರ ನಿರ್ಧರಿಸಿದೆ. ನಾಲ್ಕು ತಿಂಗಳ ಬಾಕಿಯನ್ನೂ ನೀಡುವುದಾಗಿ ಹೇಳಿದೆ. ಹೆಚ್ಚಿಸಿದ ಡಿಎ ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಇದರೊಂದಿಗೆ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಬಾಕಿ ಹಣವನ್ನು ಸರ್ಕಾರ ಜಮಾ ಮಾಡಲಿದೆ.

ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ್‌ ಸರ್ಕಾರದ ಈ ನಿರ್ಧಾರದಿಂದ ಒಟ್ಟು 4.6 ಲಕ್ಷ ರಾಜ್ಯ ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೆ, ಒಟ್ಟು 6 ಲಕ್ಷ ರಾಜ್ಯ ಸರ್ಕಾರದ ಪಿಂಚಣಿದಾರರು ಡಿಯರ್‌ನೆಸ್ ರಿಲೀಫ್ ಮೂಲಕ ಪ್ರಯೋಜನ ಪಡೆಯಲಿದ್ದಾರೆ.