ಕೇಂದ್ರ ಸರ್ಕಾರದ ಯೋಜನೆಯಾದ ಅಟಲ್ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ. ಅಕ್ಟೋಬರ್ 1ರಿಂದ ಜಾರಿಯಾಗಲಿದೆ ಹೊಸ ನೀತಿ. ಏನಿದು ಗೊತ್ತೆ?
ಇದನ್ನೂ ಓದಿರಿ: Breaking News: IT ದಾಳಿಯಲ್ಲಿ ಬರೋಬ್ಬರಿ 390 ಕೋಟಿ ಮೌಲ್ಯದ ಅಕ್ರಮ ಹಣ, ಬಂಗಾರ, ವಜ್ರ ಪತ್ತೆ!
Atal Pension Scheme: ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯ (ಎಪಿವೈ ಯೋಜನೆ) ಹೂಡಿಕೆ ನಿಯಮಗಳಲ್ಲಿ ಬದಲಾವಣೆ ಮಾಡಿದೆ.
ಆದಾಯ ತೆರಿಗೆ ಪಾವತಿಸುವ ಹೂಡಿಕೆದಾರರು 2022ರ ಅಕ್ಟೋಬರ್ 1ರಿಂದ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹರಾಗಿರೋದಿಲ್ಲ.
ಒಂದು ವೇಳೆ ಆದಾಯ ತೆರಿಗೆ ಪಾವತಿಸುತ್ತಿರುವ ವ್ಯಕ್ತಿ ಅಕ್ಟೋಬರ್ 1 ಅಥವಾ ಅದರ ನಂತರ ಎಪಿವೈ ಯೋಜನೆಗೆ ಸೇರ್ಪಡೆಗೊಂಡರೆ ಅಂಥ ಖಾತೆಯನ್ನು ಮುಚ್ಚಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ.
'2022ರ ಅಕ್ಟೋಬರ್ 1ರಿಂದ ಆದಾಯ ತೆರಿಗೆ ಪಾವತಿಸುತ್ತಿರುವ ಯಾವುದೇ ನಾಗರಿಕ ಎಪಿವೈ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹನಾಗಿಲ್ಲ.
ಒಂದು ವೇಳೆ ಯಾವುದೇ ಚಂದಾದಾರರು ಅಕ್ಟೋಬರ್ 1 ಅಥವಾ ಅದರ ನಂತರ ಸೇರ್ಪಡೆಗೊಂಡರೆ ಹಾಗೂ ಅವರು ಅರ್ಜಿ ಸಲ್ಲಿಸಿದಾಗ ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂಬುದು ತಿಳಿದು ಬಂದರೆ ಎಪಿವೈ (APY) ಖಾತೆಯನ್ನು ಮುಚ್ಚಲಾಗುತ್ತದೆ.
ಆ ದಿನಾಂಕದ ತನಕ ಸಂಗ್ರಹಣೆಗೊಂಡ ಪಿಂಚಣಿಯನ್ನು ಚಂದಾದಾರರಿಗೆ ನೀಡಲಾಗುತ್ತದೆ' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇಲ್ಲಿಯ ತನಕ 18 ಹಾಗೂ 40 ವರ್ಷಗಳ ನಡುವಿನ ಭಾರತದ ಎಲ್ಲ ನಾಗರಿಕರು ಅವರ ತೆರಿಗೆ ಪಾವತಿ ಸ್ಥಿತಿಗತಿಗಳನ್ನು ಹೊರತುಪಡಿಸಿ ಈ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹರಾಗಿದ್ದರು.
ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಚಂದಾದಾರರ ಕೊಡುಗೆಯ ಶೇ.50ರಷ್ಟನ್ನು ಅಥವಾ ವಾರ್ಷಿಕ 1,000ರೂ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ನೀಡುತ್ತದೆ.
ಸರ್ಕಾರದ ಈ ಕೊಡುಗೆ ಇಲ್ಲಿಯ ತನಕ ಇತರ ಸಾಮಾಜಿಕ ಭದ್ರತ ಯೋಜನೆಗಳ ಫಲಾನುಭವಿ ಆಗದಿರೋರಿಗೆ ಮಾತ್ರ ಲಭಿಸುತ್ತಿತ್ತು. ಅಲ್ಲದೆ, ಇಲ್ಲಿಯ ತನಕ ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ಯಾವುದೇ ಷರತ್ತು ಇರಲಿಲ್ಲ.
ಅಟಲ್ ಪಿಂಚಣಿ ಯೋಜನೆಯನ್ನು (APY scheme) ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಈ ಯೋಜನೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ನೀಡುವ ಜೊತೆಗೆ ಅಸಂಘಟಿತ ವಲಯದ ಎಲ್ಲ ನಾಗರಿಕರನ್ನು ಕೇಂದ್ರೀಕರಿಸಿತ್ತು.
ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಮೂಲಕ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಚಂದಾದಾರರಿಗೆ ಸರ್ಕಾರ ನಿಗದಿತ ಕನಿಷ್ಠ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಈ ಪಿಂಚಣಿ ಮೊತ್ತ ತಿಂಗಳಿಗೆ 1,000ರೂ. ಹಾಗೂ 5,000ರೂ. ನಡುವೆ ಇರುತ್ತದೆ.
ರೈತರೆ ಗಮನಿಸಿ: ಡೇರಿ ಉದ್ಯಮ ಆರಂಭಿಸಲು ನಬಾರ್ಡ್ ನೀಡಲಿದೆ ಬರೋಬ್ಬರಿ ₹25 ಲಕ್ಷ! ಪಡೆಯುವುದು ಹೇಗೆ ಗೊತ್ತೆ?
ಅಟಲ್ ಪಿಂಚಣಿ ಯೋಜನೆಯಿಂದ ಹೊರಹೋಗೋದು ಹೇಗೆ?
*ಚಂದಾದಾರರು ಮರಣ ಹೊಂದಿದ್ದರೆ: ಚಂದಾದಾರರು ಮರಣ ಹೊಂದಿದರೆ, ಅವರ ಪತಿ ಅಥವಾ ಪತ್ನಿಗೆ ಪಿಂಚಣಿ ನೀಡಲಾಗುತ್ತದೆ.
ಇನ್ನು ಇಬ್ಬರೂ ಅಂದರೆ ಚಂದಾದಾರರು ಹಾಗೂ ಪತಿ ಅಥವಾ ಪತ್ನಿ ಮರಣ ಹೊಂದಿದ್ರೆ ಪಿಂಚಣಿಯನ್ನು ಅವರ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
*60 ವರ್ಷ ಪೂರ್ಣಗೊಂಡ ಬಳಿಕ: 60 ವರ್ಷ ಪೂರ್ಣಗೊಂಡ ಬಳಿಕ ಪಿಂಚಣಿ ಹಣವನ್ನು ಶೇ.100ರಷ್ಟು ವರ್ಷಾಷನಗೊಳಿಸಿದ್ರೆ ಆಗ ಯೋಜನೆಯಿಂದ ಹೊರಹೋಗಬಹುದು.
*60 ವರ್ಷಕ್ಕಿಂತ ಮೊದಲು ನಿರ್ಗಮನ: 60 ವರ್ಷಗಳಿಗಿಂತ ಮೊದಲು ಈ ಯೋಜನೆಯಿಂದ ನಿರ್ಗಮಿಸಲು ಅವಕಾಶವಿಲ್ಲ. ವಿಶೇಷ ಸಂದರ್ಭಗಳಲ್ಲಿ ಅಂದ್ರೆ ಫಲಾನುಭವಿ ಸಾವನ್ನಪ್ಪಿದ್ದಲ್ಲಿ ಮಾತ್ರ ಈ ಯೋಜನೆಯಿಂದ ನಿರ್ಗಮಿಸಲು ಅವಕಾಶವಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ಆನ್ ಲೈನ್ ನಲ್ಲಿ ತೆರೆಯಲು ಅವಕಾಶ ನೀಡಲಾಗಿದೆ. ಆನ್ ಲೈನ್ ನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಪಿಎಫ್ ಆರ್ ಡಿ ಅಧಿಸೂಚನೆ ಮೂಲಕ ತಿಳಿಸಿತ್ತು.