News

ನಾಳೆ ಭಾರತ ‘ಬಂದ್‌’ಗೆ ಭಾರಿ ಬೆಂಬಲ

07 December, 2020 8:56 AM IST By:

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದುಪಡಿ ವಿರೋಧಿಸಿ ಸೇರಿದಂತೆ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಡಿ.8 ಮಂಗಳವಾರ ‘ಭಾರತ ಬಂದ್’ಗೆ ಕರೆ ನೀಡಿದ್ದು, ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಗುಪ್ಕರ್ ಗುಂಪಿನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಬಹುಜನ ಸಮಾಜವಾದಿ ಪಕ್ಷ (ಬಿಎಸ್ ಪಿ)  ಹಾಗೂ ಎಡಪಕ್ಷಗಳ ಮುಖಂಡರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

ದೆಹಲಿ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಉತ್ತರಖಂಡ, ಮಹಾರಾಷ್ಟ್ರ, ಚಂಡೀಗಢ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಒಡಿಸ್ಸಾ, ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ರೈತ ಸಂಘಟನೆಗಳು ಈ ಬಂದ್ಗೆ ಬೆಂಬಲ ಘೋಷಿಸಿವೆ.

ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಟಿಆರ್‌ಎಸ್, ಶಿವಸೇನಾ, ಅಕಾಲಿದಳಗಳೂ ಬೆಂಬಲ ನೀಡಿವೆ. ಇಂಡಿಯನ್ ಟೂರಿಸ್ಟ್ ಟ್ರಾನ್ಸ್‌ಪೋರ್ಟ್ ಸಂಘಟನೆ, ದೆಹಲಿ ಗೂಡ್ಸ್ ಟ್ರಾನ್ಸ್‌ಪೋರ್ಟ್ ಸಂಘಟನೆಗಳು, 
ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ, ಆಫೀಸರ್ಸ್ ಯೂನಿಯನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ಮೊದಲಾದ ಸಂಘಟನೆಗಳು ರೈತರ ಪರ ನಿಂತಿವೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ ನಡೆಯಲಿರುವ ಭಾರತ ಬಂದ್ಗೆ ಕರ್ನಾಟಕದಲ್ಲೂ ಬೆಂಬಲ ವಲ್ಯಕ್ತವಾಗಿದೆ. ರಾಜ್ಯದಲ್ಲಿಯೂ ರೈತ ಸಂಘಟನೆಗಳು ಬಂದ್ ನಡೆಸಲಿವೆ.

ರೈತರ ಪ್ರತಿಭಟನೆಗೆ ಬಿಎಸ್ ಪಿ ಬೆಂಬಲ:

ಡಿಸೆಂಬರ್ 8 ಮಂಗಳವಾರದಂದು ರೈತ ಸಂಘಟನೆಗಳು ಕರೆ ನೀಡಿರುವ ಭಾರತ್‌ ಬಂದ್‌ಗೆ ಬಹುಜನ ಸಮಾಜವಾದಿ ಪಕ್ಷ (ಬಿಎಸ್ ಪಿ) ಬೆಂಬಲ ಸೂಚಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು, 'ಕೃಷಿಗೆ ಸಂಬಂಧಿಸಿದ ಮೂರು ಹೊಸ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ರೈತರು ದೇಶಾದ್ಯಂತ ಆಂದೋಲನ ನಡೆಸುತ್ತಿದ್ದಾರೆ ಮತ್ತು ಡಿಸೆಂಬರ್ 8 ರಂದು ರೈತರು ಘೋಷಣೆ ಮಾಡಿರುವ "ಭಾರತ್ ಬಂಧ್"ಗೆ ಬಿಎಸ್ಪಿ  ಬೆಂಬಲ ನೀಡಿದೆ. ಅಲ್ಲದೆ, ರೈತರ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೆ ಮನವಿ ಮಾಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರತಿಪಕ್ಷಗಳಿಗೆ ಬಿಜೆಪಿ ತರಾಟೆ:

ಭಾರತ್ ಬಂದ್ ಬೆಂಬಲಿಸಿರುವ ಪ್ರತಿಪಕ್ಷಗಳನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ‘ಕೃಷಿ ಕ್ಷೇತ್ರದಲ್ಲಿ ಸುಧಾರಣೆಗೆ ಒತ್ತಾಯಿಸಿದ್ದ ಎನ್‌ಸಿಪಿ, ಡಿಎಂಕೆ ಹಾಗೂ ರೈತ ಸಂಘಗಳು ಇದೀಗ ವಿರೋಧಿಸುತ್ತಿವೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟೀಕಿಸಿದ್ದಾರೆ. 

‘ಕೃಷಿ ಕ್ಷೇತ್ರದಲ್ಲಿ ಪರ್ಯಾಯ ಸ್ಪರ್ಧಾತ್ಮಕ ಮಾರುಕಟ್ಟೆಯ ಮಾರ್ಗ ತೆರೆಯಲು ಖಾಸಗಿ ಭಾಗವಹಿಸುವಿಕೆಯನ್ನು ಶರದ್ ಪವಾರ್ 2010ರಲ್ಲಿ ಪ್ರತಿಪಾದಿಸಿದ್ದರು. 2016ರ ಪ್ರಣಾಳಿಕೆಯಲ್ಲಿ ಕೃಷಿ ಉತ್ಪನ್ನಗಳ ಮುಕ್ತ ಮಾರಾಟವನ್ನು ಡಿಎಂಕೆ ಪ್ರಸ್ತಾಪಿಸಿತ್ತು. ಕೃಷಿ ಮಾರುಕಟ್ಟೆಯಲ್ಲಿ ಕಾರ್ಪೊರೇಟ್ ಸಹಭಾಗಿತ್ವಕ್ಕೆ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ ರೈತರು ಪ್ರತಿಭಟನೆ ನಡೆಸಿದ್ದರು. ಈಗ ವಿರೋಧಿಸುತ್ತಿರುವುದು ಕಪಟತನದ ಪರಮಾವಧಿ’ ಎಂದಿದ್ದಾರೆ.