ಅಧಿಕ ಇಳುವರಿಗೆ ಉತ್ತಮ ಬೀಜಗಳ ಆಯ್ಕೆ ಬಹುಮುಖ್ಯ. ಅಷ್ಟೇ ಅಲ್ಲ, ಉತ್ತಮ ತಳಿಯ ಆಯ್ಕೆಯೊಂದಿಗೆ ಬೀಜೋಪಚಾರ, ಜಮೀನು ಫಲವತ್ತತೆಯಿಂದ ಕೂಡಿದ್ದರೆ ನಿರೀಕ್ಷಯಂತೆ ಇಳುವರಿಪಡೆಯಬಹುದು. ಒಳ್ಳೆಯ ತಳಿಗಳ ಆಯ್ಕೆ ಹೇಗೆ ಮಾಡಬೇಕೆಂದುಕೊಂಡಿದ್ದೀರಾ... ಇಲ್ಲಿದೆ ಸಂಪೂರ್ಣ ಮಾಹಿತಿ.
ಒಳ್ಳೆಯ ತಳಿಗಳ ಆಯ್ಕೆ ಏಕೆ ಮಾಡಬೇಕು.?
ಮನುಸ್ಮೃತಿ ಎಂಬ ಗ್ರಂಥದಲ್ಲಿ “ಸುಬೀಜ್ಞಂ ಸುಕ್ಷೇತ್ರ ಜಯತೇ ಸಮ್ಪಾದ್ಯತೆ ಎಂದು ನಮೂದಿಸಿದ್ದಾರೆ. ಇದರ ಅರ್ಥ ಉತ್ತಮ ಮಣ್ಣಿನಲ್ಲಿ ಉತ್ತಮ ಬೀಜ ಬಿತ್ತನೆ ಮಾಡಿದರೆ ಉತ್ತಮವಾದ ಇಳುವರಿಯನ್ನು ಪಡೆಯಬಹುದು ಎಂದರ್ಥ.
ಒಳ್ಳೆಯ ತಳಿಗಳ ಗುಣಲಕ್ಷಣಗಳು:
-ಮೊದಲನೆಯದಾಗಿ ತಳಿಗಳ ಬೀಜವು ದಪ್ಪ ಗಾತ್ರದಲ್ಲಿ ಇದ್ದು ಉತ್ತಮ ಪೌಷ್ಠಿಕಾಂಶಗಳಿಂದ ಕೂಡಿರಬೇಕು.
-ಅತೀ ಮುಖ್ಯವಾದ ಗುಣಲಕ್ಷಣ, ತಳಿ ಶುದ್ಧತೆ
ತಳಿ ಶುದ್ಧತೆ ಯೆಂದರೆ- ಭತ್ತದ ತಳಿ ಜಯ ಉಪಯೋಗಿಸುವುದಾದರೆ, ಸಂಪೂರ್ಣ ತಳಿಗಳು ಜಯ ತಳಿಯ ಬೀಜಗಳನ್ನೇ ಹೊಂದಿರಬೇಕು. ಅನ್ಯ ತಳಿಗಳ ಬೀಜಗಳು ಮುಖ್ಯವಾಗಿ ಬಿತ್ತನೆ ಮಾಡಬೇಕಾದ ತಳಿಯೊಂದಿಗೆ ಮಿಶ್ರಣವಾಗಿರಬಾರದು.
-ಮೊಳಾಕೆಯೊಡೆಯುವಿಕೆ: ರೈತರಿಗೆ ತಿಳಿದಿರುವ ಹಾಗೆ, ಮೊಳಕೆ ಒಡೆಯುವ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ, ರೋಗ ನಿರೋಧಕ ಸಸಿ ಹಾಗೂ ಹೆಚ್ಚಿನ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಬಹುದು.
-ಅನುವಂಶಿಯ ಶುದ್ಧತೆ ಇರಬೇಕು.
-ರೋಗ ಅಥವಾ ಯಾವುದೇ ಕೀಟದ ಸೋಂಕಿನಿಂದ ಹೊರತಾಗಿರಬೇಕು.
-ಕಳೆ, ಕಲ್ಲು, ತ್ಯಾಜ್ಯ ಹಾಗೂ ಇತರೆ ತಳಿಗಳ ಮಿಶ್ರಣದಿಂದ ಮುಕ್ತವಾಗಿದ್ದರೆ ತಳಿ ಶುದ್ಧತೆಯನ್ನು ಕಾಪಾಡಿಕೊಳ್ಳಬಹುದು
-ಬೌದ್ಧಿಕ ಶುದ್ಧತೆ : ಕಲ್ಲು, ಮಣ್ಣು, ಬೇರೆ ಅನಗತ್ಯ ವಸ್ತುಗಳಿಂದ ಮುಕ್ತವಾಗಿದ್ದರೆ ಬೌದ್ಧಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಶ್ವಿಯಾಗಬಹುದು.
ಇವುಗಳು ಉತ್ತಮ ತಳಿಯ ಗುಣಲಕ್ಷಣಗಳಾಗಿರುತ್ತವೆ. ಇದರಿಂದ ಅಧಿಕ ಇಳುವರಿ ಪಡೆಯುವಲ್ಲಿ ಯಶಶ್ವಿಯಾಗಬಹುದು.
ಒಳ್ಳೆಯ/ ಉತ್ತಮವಾದ ತಳಿಯನ್ನು ಎಲ್ಲಿ ಪಡೆಯಬೇಕು?
-ಕೃಷಿ ಇಲಾಖೆ
-ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ
-ರೈತ ಸಂಪರ್ಕ ಕೇಂದ್ರ
-ಕರ್ನಾಟಕ ರಾಜ್ಯ ಬೀಜ ನಿಗಮ
ಸರ್ಕಾರದ ಕೃಷಿ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ ಬೀಜ ಹಾಗೂ ಬೀಜೋಪಚಾರಕ್ಕೆಬೇಕಾಗಿರುವ ಜೀವಾಣು ಗೊಬ್ಬರ, ಶಿಲೀಂಧ್ರ ನಾಶಕಗಳು, ಕೀಟ ನಾಶಕಗಳು ಮತ್ತು ಇತರೆ ಕೃಷಿ ಹಾಗೂ ತೋಟಗಾರಿಕೆ ಸಂಬಧಿತ ವಸ್ತುಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯ ಮುಖಾಂತರ ಪಡೆಯಬಹುದು. ಇವರು ಪ್ರದೇಶಕ್ಕೆ ತಕ್ಕಂತೆ ಬೀಜ ವಿತರಣೆಯನ್ನು ರಿಯಾಯಿತಿ ದರದಲ್ಲಿ ನೀಡುತ್ತಾರೆ. ಬಿತ್ತನೆ ಬೀಜಕ್ಕೆ ಸಾಮಾನ್ಯ ವರ್ಗದವರಿಗೆ 50 % ರಿಯಾಯಿತಿ ದರದಲ್ಲಿ ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ರೈತರಿಗೆ 75 % ದರದಲ್ಲಿ ನೀಡುತ್ತಾರೆ.
ಲೇಖನ: ಡಾ. ಪ್ರಿಯಾಂಕ, ಎಂ,ಡಾ. ಪ್ರವೀಣ್, ಹೆಚ್. ಜಿ., ಮತ್ತು ಡಾ. ಕಿರಣ್, ಬಿ. ಒ.
ಸಹಾಯಕ ಪ್ರಾಧ್ಯಾಪಕಿ (ಗುತ್ತಿಗೆ), ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ
ಹಿರಿಯ ಸಂಶೊಧನ ಸಹಚರರು, ಬೆಳೆ ಶರೀರ ಕ್ರಿಯಾಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು
ಸಹಾಯಕ ಪ್ರಾಧ್ಯಾಪಕ, ಬೆಳೆ ಶರೀರ ಕ್ರಿಯಾಶಾಸ್ತ್ರ ವಿಭಾಗ, ಕೃಷಿ ಕಾಲೇಜು, ಬಿಜಾಪುರ