ಗ್ರಾಹಕರ ಸಮಯ ಉಳಿತಾಯದ ಜೊತೆಗೆ ತ್ವರಿತ ಅಂಚೆ ವಿಲೇವಾರಿಗೆ ಅನುಕೂಲವಾಗುವಂತೆ ಕರ್ನಾಟಕ ವಲಯ ಅಂಚೆ ಇಲಾಖೆಯು ದೇಶದಲ್ಲೇ ಮೊದಲ ಬಾರಿಗೆ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಯಂತ್ರವನ್ನು ಪರಿಚಯಿಸಿದೆ. ಇದರಿಂದಾಗಿ ಸ್ಪೀಡ್ ಪೋಸ್ಟ್ ಹಾಗೂ ನೋಂದಾಯಿತ ಪೋಸ್ಟ್ ಸೇವೆಗೆ ಅಂಚೆ ಕಚೇರಿಗಳಿಗೆ ತೆರಳಿ, ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪಲಿದೆ.
ಎಟಿಎಂ ಮಾದರಿಯಲ್ಲಿರುವ ಈ ಯಂತ್ರವನ್ನು ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಪೂರ್ವ ವಲಯದ ಅಂಚೆ ಕಚೇರಿಯಲ್ಲಿ ಅಳವಡಿಸಲಾಗಿದೆ. ಜೊತೆಗೆ ಅಂಚೆ ಇಲಾಖೆಯು ಸ್ಮಾರ್ಟ್ ಪೋರ್ಸ್ಟ್ ಕಿಯೋಸ್ಕ್ ಆ್ಯಪ್ ಸಹ ಅಭಿವೃದ್ಧಿಪಡಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದೆ.
ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಹೇಗೆ ಕೆಲಸ ಮಾಡಲಿದೆ?
ಗ್ರಾಹಕರು ಮೊಬೈಲ್ ಆ್ಯಪ್ ನಲ್ಲಿ ವಿಳಾಸ ಭರ್ತಿ ಮಾಡಿದ ನಂತರ ಆರು ಅಂಕಿಯ ಕೋಡ್ ಸೃಷ್ಟಿಯಾಗಲಿದೆ. ಕಿಯೋಸ್ಕ್ ಯಂತ್ರದಲ್ಲಿ ಗ್ರಾಹಕರು ಮೊದಲು ಸ್ಪೀಟ್ ಪೋಸ್ಟ್ ಅಥವಾ ನೋಂದಾಯಿತ ಪೋಸ್ಟ್ ಎರಡರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕಳಿಸುವ ಪತ್ರದ ಪ್ರಕಾರವನ್ನು ಆಧರಿಸಿ ಬಾರ್ ಕೋಡ್ ಅನ್ನು ಯಂತ್ರವು ರಚಿಸುತ್ತದೆ.ಅದನ್ನು ಪತ್ರಕ್ಕೆ ಅಂಟಿಸಿ ಯಂತ್ರದ ನೆರವಿನಿಂದ ಸ್ಯ್ಕಾನ್ ಮಾಡಿದಲ್ಲಿ ಮುಚ್ಚಳವು ತೆರೆದುಕೊಳ್ಳುತ್ತದೆ. ಅದರಲ್ಲಿ ಪತ್ರದಲ್ಲಿ ಹಾಕಿದ ಬಳಿಕ ದೂರ, ತೂಕದ ಆಧಾರದ ಮೇಲೆ ಯಂತ್ರವು ದರವನ್ನು ಪ್ರದರ್ಶಿಸುತ್ತದೆ.ಕಿಯೋಸ್ಕಾನ್ ಪರದೆ ಮೇಲೆ ಕಾಣಿಸುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಗೂಗಲ್ ಪೇ, ಫೋನ್ ಪೇ ಸೇರಿದಂತೆ ವಿವಿಧ ಡಿಜಿಟಲ್ ಹಣ ಪಾವತಿ ಮೊಬೈಲ್ ಆಗಳ ನೆರವಿನಿಂದ ಪಾವತಿಸಬಹುದು. ಈ ಪ್ರಕ್ರಿಯೆ ಮುಗಿದ ಬಳಿಕ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಹಾಗೂ ಈ ಮೇಲ್ ವಿಳಾಸಕ್ಕೆ ರಶೀದಿಯ ಪ್ರತಿ ಬರುತ್ತದೆ.
ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಎಟಿಎಂ ಮಾದರಿಯಲ್ಲಿ ಇದರಲ್ಲಿ ಪೋಸ್ಟ್ ಕಳಿಸಬಹುದು.
ಡಿಜಿಟಲ್ ಇಂಡಿಯಾ ಯೋಜನೆಯಡಿ ಸಿ-ಡಾಕ್ ಬೆಂಗಳೂರು ಮತ್ತು ಕರ್ನಾಟಕ ವೃತ್ತ ಅಂಚೆ ಇಲಾಖೆ ಸಹಯೋಗದಲ್ಲಿ ಸಾರ್ಟ್ ಪೋಸ್ಟ್ ಕಿಯೋಸ್ಕ್ ರೂಪಿಸಲಾಗಿದೆ. ಶೀಘ್ರದಲ್ಲೇ ಇಂತಹ ಕಿಯೋಸ್ಕ್ ಗಳನ್ನು ಹೈಕೋರ್ಟ್ ಆವರಣ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆಗಳ ಅನುಗುಣವಾಗಿ ಇತರೆ ಪ್ರದೇಶಗಳಲ್ಲಿ ಅಳವಡಿಸಲಾಗುವುದು ಎಂದು ಕರ್ನಾಟಕ ಅಂಚೆ ಇಲಾಖೆಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ತಿಳಿಸಿದ್ದಾರೆ.
ಈ ಕಿಯೋಸ್ಕ್ ಪ್ರಸ್ತುತ ಮೂರು ಭಾಷೆಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ಇಂಗ್ಲಿಷ್, ಹಿಂದಿ ಮತ್ತು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಲಿದೆ. ದೇಶಾದ ವಿವಿಧ ಅಂಚೆ ವಿಭಾಗಗಳಲ್ಲಿ ಅಳವಡಿಸಿದ ಕೂಡಲೇ ಹೆಚ್ಚಿನ ಭಾಷೆಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಿಎಸಿ) ಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್ ಡಿ ಸುದರ್ಶನ್ ತಿಳಿಸಿದ್ದಾರೆ.