News

ಏಕ ಬೆಳೆ ಮತ್ತು ಮಳೆ ನೆಚ್ಚಿಕೊಂಡರೆ ಹಾನಿ, ಬಹುಬೆಳೆಯೊಂದಿಗೆ ಪಶುಸಾಕಾಣಿಕೆ ಮಾಡಿ

20 April, 2021 9:15 PM IST By:
farmer

ನೀವು ಮನಸ್ಸು ಮಾಡಿದರೆ ಚಿಕ್ಕ ಹೊಲದಲ್ಲಿಯೆ ಅದ್ಬುತ ಸಾಧನೆ ಮಾಡಬಹುದು, ರೈತರು ಒಂದೇ ಬೆಳೆ ಮತ್ತು ಮಳೆ ನೆಚ್ಚಿಕೊಂಡಿರುವುದರಿಂದ ಬಹುವರ್ಷಗಳಿಂದ ಕಷ್ಟ, ನಷ್ಟ ಅನುಭವಿಸುತ್ತಿದ್ದಾರೆ. ಇದರ ಬದಲು ಕೃಷಿ ಹೊಂಡದ ಮೂಲಕ ವಿವಿಧ ಬೆಳೆ, ತರಕಾರಿ, ಪಶು ಸಾಕಾಣಿಕೆ, ಹಣ್ಣಿನ ಗಿಡಗಳ ಪೋಷಣೆ, ಮೀನು ಮತ್ತು ಜೇನು ಸಾಕಾಣಿಕೆಯಂತಹ ಸಮಗ್ರ ಕೃಷಿ ಕೈಗೊಂಡರೆ ಲಾಭದ ಬದುಕು ಕಟ್ಟಿಕೊಳ್ಳಬಹುದು ಎಂದು ಕೃಷಿ ವಿವಿಯ ಎಮ್. ಬಿ. ಪಾಟಿಲ್ ಹೇಳಿದರು.

ಅವರು ಕೃಷಿ ಶಿಕ್ಷಣ ವಿಸ್ತರಣಾ ಕೇಂದ್ರ, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ ಮತ್ತು ಮುಕುಂದ ಸುಮಿ ಸ್ಪೇಷಲ್ ಸ್ಟೀಲ್ ಲಿಮಿಟೆಡ್ ಹಾಗೂ  ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ  ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದತ್ತು ಗ್ರಾಮ ಅಡವಿಹಳ್ಳಿಯ ರೈತರಿಗೆ, ಯುವಕರಿಗೆ, ರೈತ ಮಹಿಳೆಯರಿಗೆ  ಮತ್ತು   ಸ್ವಸಹಾಯ ಗುಂಪಿನ ಸದಸ್ಯರಿಗೆ ಹಮ್ಮಿಕೊಂಡ ಸಮಗ್ರ ಕೃಷಿ ಪದ್ದತಿ ತರಬೇತಿಯಲ್ಲಿ ಮಾತನಾಡಿದರು.

 ಸಾವಯವ ಕೃಷಿಯ ಮೂಲಕ ಅಭಿವೃಧ್ಧಿಯತ್ತ ಹೆಜ್ಜೆಯನ್ನು ಹಾಕಿ ಸಮೃಧ್ಧ ದೇಶ ಕಟ್ಟಲು ಗಣನೀಯ ಪಾತ್ರವನ್ನು ವಹಿಸಿರಿ ಎಂದು ತಿಳಿಸಿದರು. ಮಳೆ ನೀರು ಸಂಗ್ರಹಣೆ, ಹನಿ ನೀರಾವರಿ, ಸುಧಾರಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ಪ್ರಗತಿಪರ ರೈತರಾಗಿ ಎಂದು ಹಾರೈಸಿದರು. 

ಪಶು ವೈದ್ಯಾಧಿಕಾರಿ ಶಿವರಾಜ ಶೆಟ್ಟರ  ಅವರು ಮಾತನಾಡಿ, ಕುರಿ ಸಾಕಾಣಿಕೆ, ಕೋಳಿ, ಮೇಕೆ, ಮೊಲ ಮತ್ತು ಬಾತುಕೋಳಿ ಸಾಕಾಣಿಕೆಗಳ ಜೊತೆಗೆ ಹೈನುಗಾರಿಕೆ ಮುಂತಾದ ಪಶುಸಂಗೊಪನೆಗಳ ಬಗ್ಗೆ ಮಾಹಿತಿ ನೀಡಿದರು. ಪಶುಗಳಿಗೆ ಬರುವ ರೋಗಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕ್ರಮಗಳು ಬಗ್ಗೆ ತಿಳಿಸಿ ಲಾಭದಾಯಕ ಉದ್ಯೋಗ ಅಳವಡಿಸಿಕೋಳ್ಳುವಂತೆ ತಿಳಿಸಿದರು.

ಸರ್ವೋದಯ ಸಂಸ್ಥೆ ಅಧ್ಯಕ್ಷರಾದ ನಾಗರಾಜ ದೇಸಾಯಿ  ಅಧ್ಯಕ್ಷತೆವಹಿಸಿ ಮಾತನಾಡಿ,  ರೈತರ ಆದಾಯದ ಮೂಲ ದ್ವಿಗುಣ ಮಾಡುವುದೇ ನಮ್ಮ ಸವೋದಯ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಇರುವ ಭೂಮಿಯಲ್ಲಿಯೆ ಹೆಚ್ಚಿನ ಆದಾಯ ತೆಗೆದು ಬರದ ನಡುವೆಯೂ ಬದುಕು ಕಟ್ಟಿಕೊಳ್ಳಲು ಸಮಗ್ರ ಕೃಷಿ ಪದ್ದತಿಗೆ ಅಣಿಗೊಳ್ಳಿ ಎಂದು ಕರೆ ಕೊಟ್ಟರು. 

 ಗ್ರಾಮ ಪಂಚಾಯತ  ಸದಸ್ಯರಾದ ರೇಣುಕಪ್ಪ, ಮುಖ್ಯಗುರುಗಳಾದ ವಿರಭದ್ರಪ್ಪ ಉಪಸ್ಥಿತರಿದ್ದರು. ಸಂಸ್ಥೆಯ ಭೀಮರಾವ್ ದೇಶಪಾಂಡೆ ಸ್ವಾಗತಿಸಿದರು. ಅಕ್ಕಮ್ಮ ಕೊಟಗಿ ವಂದಿಸಿದರು.