ಬೀಜ ಉತ್ತಮವಾಗಿರುತ್ತದೆ ಇಳುವರಿಯೂ ಚೆನ್ನಾಗಿರುತ್ತದೆ ಎಂಬುದು ಹಿರಿಯರ ಮಾತು. ಬೀಜ ಬಿತ್ತುವುದಕ್ಕಿಂತ ಮುಂಚಿತವಾಗಿ ಬೀಜೋಪಚಾರ ಮಾಡಿದರೆ ಮುಂದೆ ಬರುವ ರೋಗಗಳನ್ನು ತಡೆಯಬಹುದು ಎಂಬುದು ಕೃಷಿ ತಜ್ಞರ ಮಾತು. ಹೌದು ಮುಂಗಾರು ಆರಂಭವಾಗಿದ್ದರಿಂದ ಬೀಜೋಪಚಾರದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬೀಜೋಪಚಾರ ಮಾಡುವುದು ಹೇಗೆ?
ಯಾವುದೇ ಬೆಳೆ ಬೆಳೆಯುವುದಕ್ಕಿಂತ ಮುಂಚೆ ಬೀಜೋಪಚಾರ ಅತೀ ಮುಖ್ಯ. ಮುಂಗಾರಿನಲ್ಲಿ ಕೈಗೊಳ್ಳುವ ಬಿತ್ತನೆ ಕಾರ್ಯಕ್ಕೆ ಮುಖ್ಯವಾಗಿ ಕೃಷಿಯಲ್ಲಿ ಬೀಜೋಪಚಾರಕ್ಕೆ ಒತ್ತು ನೀಡಬೇಕಾಗಿದೆ. ಒಂದು ಎಕರೆಗೆ ಬೇಕಾಗುವಷ್ಟು ಬೀಜಗಳನ್ನು ತೆಗೆದುಕೊಳ್ಳಬೇಕು, ನಂತರ ಒಂದು ಲೀಟರ್ ನೀರಿನಲ್ಲಿ 250 ಗ್ರಾಂ ಬೆಲ್ಲವನ್ನು ಹಾಕಿ ಕುದಿಸಿ ಅದನ್ನು ಆರಿಸಬೇಕು. ಮೊದಲಿಗೆ ಒಂದು ಎಕರೆಗೆ ಬೇಕಾಗುವ ಬೀಜಗಳ ಮೇಲೆ ಬೆಲ್ಲದ ಪಾಕವನ್ನು ಸ್ವಲ್ಪ ಹಾಕಬೇಕು. ಅದಾದ ನಂತರ ಪ್ರತಿ ಕೆಜಿ ಬೀಜಕ್ಕೆ 5-10 ಗ್ರಾಂನಂತೆ ಟ್ರೈಕೋಡರ್ಮಾ ಪುಡಿಯನ್ನು ಸೇರಿಸಿ ಪ್ರತಿಯೊಂದು ಬೀಜಕ್ಕೂ ಅಂಟುವ ಹಾಗೆ ಸರಿಯಾಗಿ ಅದನ್ನು ಲೇಪಿಸಬೇಕು. ಇದನ್ನು ಬಿತ್ತನೆಗೆ 4 ತಾಸುಗಳ ಮುಂಚಿತವಾಗಿ ಬಿಜೋಪಚಾರ ಮಾಡಬೇಕು. ಹೀಗೆ ಮಾಡುವುದರಿಂದ ಬೀಜ ಹಾಗೂ ಮಣ್ಣಿನ ಮೂಲಕ ಹುಟ್ಟುವಂತಹ ರೋಗಗಳನ್ನು ತಡೆಯಬಹುದು. ಟ್ರೈಕೋಡರ್ಮಾ ವಿವಿಧ ಬೆಳೆಗಳ ಬೇರು ವ್ಯಾಪ್ತಿಯಲ್ಲಿ ಬೆಳೆದು ಮಣ್ಣಿನಿಂದ ಹರಡುವ ರೋಗಗಳನ್ನು ಜೈವಿಕವಾಗಿ ಸಮರ್ಪಕ ರೀತಿಯಲ್ಲಿ ಹತೋಟಿ ಮಾಡುವ ಸಾಮರ್ಥ್ಯವುಳ್ಳ ಉಪಯುಕ್ತವಾದ ಶಿಲೀಂದ್ರ ಜೀವಿಯಾಗಿದೆ ಎಂದು ಕೃಷಿ ತಜ್ಞರು ಹೇಳುತ್ತಾರೆ.
ನೆಲಗಡಲೆ ಬೆಳಗೆ ಬೀಜೋಪಚಾರ
ಬಿತ್ತುವ ಮೊದಲು ಪ್ರತಿ ಕಿ.ಗ್ರಾಂ ನೆಲಗಡಲೆ ಬೀಜಕ್ಕೆ 5 ಗ್ರಾಂ ಟ್ರೈಕೋಡರ್ಮಾ ಬೆರೆಸಿ ನೆರಳಿನಲ್ಲಿ ಒಣಗಿಸಬೇಕು. ನಂತರ ಒಂದು ಎಕರೆ ಬಿತ್ತನೆ ಬೀಜಕ್ಕೆ 150 ಗ್ರಾಂ ರೈಜೋಬಿಯಂ ಮತ್ತು 400 ಗ್ರಾಂ ಪಿಎಸ್.ಬಿ ಜೈವಿಕ ಗೊಬ್ಬರಗಳನ್ನು ಅಂಟು ದ್ರಾವಣದಿಂದ ಉಪಚರಿಸಿ ಬಿತ್ತನೆ ಮಾಡಬೇಕು.
ದ್ವಿದಳ ಧಾನ್ಯಗಳಿಗೆ ಬೀಜೋಪಚಾರ
ತೊಗರಿ, ಉದ್ದು, ಹೆಸರು, ಅವರೆ ಸೇರಿದಂತೆ ಇನ್ನಿತರ ದ್ವಿದಳ ಧಾನ್ಯಗಳನ್ನು ಬಿತ್ತುವು ಮೊದಲು 200 ಗ್ರಾಂ ರೈಜೋಬಿಯಂ, 200 ಗ್ರಾಂ ರಂಜಕದೊಂದಿಗೆ ಬಿಜೋಪಚಾರ ಮಾಡಬೇಕು. ತೊಗರಿ ಬೆಳೆಯಲ್ಲಿ ಸೊರಗು ರೋಗದ ಹತೋಟಿಗೆ ಪ್ರತಿ ಕಿಗ್ರಾಂ ಬಿತ್ತನೆ ಬೀಜಕ್ಕೆ 5 ಗರಾಂ ಟ್ರೈಕೋಡರ್ಮಾದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
ಬೀಜೋಪಚಾರದಿಂದ ಆಗುವ ಲಾಭಗಳು
ಬೀಜೋಪಚಾರ ಮಾಡಿ ಬಿತ್ತುವುದರಿಂದ 30 ದಿನಗಳ ಕಾಲ ಬೆಳೆಗಳಿಗೆ ಯಾವುದೇ ರೀತಿಯ ರೋಗ ಮತ್ತು ಕೀಟಗಳು ಬರುವುದಿಲ್ಲ. ಬೆಳೆಯಿಂದ ಬೆಳೆಗೆ ಬೀಜಗಳ ಮುಖಾಂತರ ಹರಡುವ ರೋಗಗಳನ್ನು ನಿಯಂತ್ರಿಸಬಹುದು.. ಬೀಜಗಳ ಮೊಳಕೆ ಪ್ರಮಾಣವನ್ನು ಹೆಚ್ಚಿಸಿ ಸಸಿಗಳ ಸಂಖ್ಯೆಯನ್ನು ಕಾಪಾಡಬಹುದು.