News

ರೈತರ ಅಂಗೈನಲ್ಲಿಯೇ ಬೆಳೆ ಸಮೀಕ್ಷೆಗೆ ಮಾಹಿತಿ ಲಭ್ಯ ಆ. 24 ರೊಳಗೆ ಮಾಹಿತಿ ನೀಡಿ

18 August, 2020 11:14 AM IST By:

ರೈತರು ತಾವು ಬೆಳೆದ ಬೆಳೆಯ ಮಾಹಿತಿ ದಾಖಲಿಸಲು ಬೆಳೆ ಸಮೀಕ್ಷೆ ಕಾರ್ಯ ಈಗಾಗಲೇ ಆರಂಭವಾಗಿದೆ, ತಮ್ಮ ಬೆಳೆಗಳ ಕುರಿತು ರೈತರೇ ಮೊಬೈಲ್ ಆ್ಯಪ್ ಮೂಲಕ  ಆ.24ರ ಒಳಗೆ ಚಿತ್ರ ಸಹಿತ ಮಾಹಿತಿ ಅಪ್‌ಲೋಡ್ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದಾರೆ.

ಮೂರು ವರ್ಷಗಳಿಂದ ಬೆಳೆ ಸಮೀಕ್ಷೆ ಮಾಡಲಾಗುತ್ತಿದ್ದು, ಅದರಲ್ಲಿ ಶೇ.40 ರಿಂದ 50ರಷ್ಟು ವ್ಯತ್ಯಾಸವಾಗುತ್ತಿತ್ತು. ಹೀಗಾಗಿ ಈ ವರ್ಷದಿಂದ ರೈತರಿಂದಲೇ ಸಮೀಕ್ಷೆ ಮಾಡಿಸಲಾಗುತ್ತಿದೆ. ಉದಾಹಣೆಗೆ ಸರ್ವೆ ನಂ. 50 ಇದ್ದರೆ, ಅದೇ ಸರ್ವೆ ಸಂಖ್ಯೆಯಲ್ಲಿ ನಾಲ್ಕು ಅಥವಾ ಐದು ಮಂದಿ ಅಣ್ಣ-ತಮ್ಮಂದಿರು ಅದೇ ಹೊಲದಲ್ಲಿ ವಿವಿಧ ಬೆಳೆ ಬೆಳೆದಿರುತ್ತಾರೆ. ಹೀಗಾಗಿ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ಅದಕ್ಕೆ  ಪ್ರಸಕ್ತ ವರ್ಷದಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಚಿತ್ರ ತೆಗೆದು, ಸ್ವಯಂ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗೊಂದಲಗಳಿದ್ದಲ್ಲಿ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ನೆರವು ಪಡೆಯಬಹುದು. ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸರಿಯಾದ ತಿಳುವಳಿಕೆ ನೀಡಬೇಕು ಎಂದರು.

ರೈತರು ತಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲದೇ ಇದ್ದಲ್ಲಿ ತಮ್ಮ ಸ್ನೇಹಿತರ ಅಥವಾ ಪರಿಚಯಸ್ಥರ ಸ್ಮಾರ್ಟ್ ಪೋನ್ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಒಂದು ವೇಳೆ ಅಪರಿಚಿತರಿಂದ ಬೆಳೆಸಲು ಕೈಗೊಳ್ಳದಿದ್ದಲ್ಲಿ ಸರ್ಕಾರದಿಂದ ನಿಯೋಜಿಸಲ್ಪಟ್ಟ ಪಿಆರ್ ಗಳಿಂದ ಬೆಳೆ ಸಮೀಕ್ಷೆ ನಡೆಸಬೇಕು. ಈಗಾಗಲೇ ನಾವು ಅವರಿಗೆ ಅಗತ್ಯ ತರಬೇತಿಯನ್ನು ನೀಡಿದ್ದೇವೆ. ಪಿಆರ್ ಗಳು ರೈತರಿಗೆ ಸಹಕರಿಸಬೇಕು ಎಂದರು.

ರೈತರು, ಈ ಆ್ಯಪ್ ಮೂಲಕ ತಾವು ಬೆಳೆದಿರುವ ಬೆಳೆಗಳ ಮಾಹಿತಿಯನ್ನು ಗೂಗಲ್ ಪ್ಲೇ ಸ್ಟೋರ್‍ನಲ್ಲಿ ‘ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್’ (Farmers crop Survey 2020-21) ಎಂದು ಹುಡುಕಿ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಬೇಕು. ರೈತರು ಮೊಬೈಲ್ ಸಂಖ್ಯೆ ಮತ್ತು ಓಟಿಪಿ (OTP) ಸಂಖ್ಯೆಯನ್ನು ನಮೂದಿಸಿ ತಮ್ಮ ಬೆಳೆದ ಬೆಳೆಯ ವಿವರಗಳನ್ನು ನೊಂದಣಿ ಮಾಡಿಕೊಳ್ಳಬೇಕು. ರೈತರು ನಿಗದಿತ ಸಮಯದೊಳಗೆ ಬೆಳೆಯ ಮಾಹಿತಿಯನ್ನು ಅಪ್ಲೋಡ್ ಮಾಡದಿದ್ದಲ್ಲಿ ಆ.24ರ ನಂತರ ಖಾಸಗಿ ನಿವಾಸಿಗಳ ಸಹಾಯದಿಂದ ತಮ್ಮ ಜಮೀನಿನಲ್ಲಿರುವ ಬೆಳೆ ಮಾಹಿತಿ ದಾಖಲಿಸಬಹುದು.